ವಿಧಾನಸಭೆಯಲ್ಲಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡದ ಸಚಿವರಿಗೆ ಸ್ಪೀಕರ್ ಕಠಿಣ ಎಚ್ಚರಿಕೆ.
ಬೆಂಗಳೂರು: ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆದ ಸ್ಪೀಕರ್ ಯು.ಟಿ. ಖಾದರ್ ಸಮಯ ಹೇಳದೆ ಕಲಾಪವನ್ನು ಮುಂದೂಡಿರುವ ಪ್ರಸಂಗ ನಡೆದಿದೆ. ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಉತ್ತರ ಕೊಡದಿರಲು ಕಾರಣ ಹೇಳುವವರೆಗೂ ಸದನ ನಡೆಸಲ್ಲ ಎಂದು ಕಲಾಪ ಮೊಟಕು ಮಾಡಿ ಪೀಠದಿಂದ ತೆರಳಿದ್ದಾರೆ. ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡನೆ ವೇಳೆ ಈ ಪ್ರಸಂಗ ನಡೆದಿದೆ.
ಸದನದಲ್ಲಿ ಸಚಿವ ಪರಮೇಶ್ವರ್ ಉತ್ತರಗಳನ್ನು ಮಂಡಿಸುತ್ತಿದ್ದ ವೇಳೆ ವಿಪಕ್ಷಗಳ ಸದಸ್ಯರಿಂದ ಟೀಕೆ ವ್ಯಕ್ತವಾಗಿದೆ. ಕಲಾಪ ಆರಂಭದಿಂದಲೂ ಸಚಿವರಿಂದನಿರೀಕ್ಷಿತ ಉತ್ತರ ಬಂದಿಲ್ಲ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಸಭಾತ್ಯಾಗ ಮಾಡಿದ್ದಾರೆ. ಪ್ರತಿದಿನವೂ ಶೇ. 10-30 ಲಿಖಿತ ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಡುತ್ತಿದ್ದಾರೆ. ಸರ್ಕಾರ ಹೆಣದಂತಾಗಿದ್ದು, ಸಿಎಂ ಹಿಡಿತ ಕಳೆದುಕೊಂಡಿದ್ದಾರೆ. ಸಚಿವರು ಸದನಕ್ಕೆ ಬರುತ್ತಿಲ್ಲ. ಯಾರು ಸಿಎಂ ಅಂತಾ ತೀರ್ಮಾನ ಆಗದಿರುವ ಕಾರಣ ಈ ರೀತಿ ಆಗುತ್ತಿದೆ. ಸ್ಪೀಕರ್ ನೊಂದು ಹೊರ ಹೋಗಿರುವುದು ಸರ್ಕಾರಕ್ಕೆ ಚಾಟಿ ಏಟು ನೀಡಿದಂತಾಗಿದೆ. ಸ್ಪೀಕರ್ ನಡೆಯನ್ನು ಸ್ವಾಗತಿಸುತ್ತೇವೆ. ಸರ್ಕಾರ ಬದುಕಿದ್ದರೆ ಸಿಎಂ ಬಂದು ಕ್ಷಮೆ ಕೇಳಬೇಕು. ಮಾನ, ಮಾರ್ಯಾದೆ ಇದ್ದರೆ ಸಚಿವರು ರಾಜೀನಾಮೆ ಕೊಟ್ಟು ಹೋಗಬೇಕು ಎಂದು ತಿವಿದಿದ್ದಾರೆ. ವಿಧಾನಸಭೆ ಇತಿಹಾಸದಲ್ಲಿಯೇ ಸರ್ಕಾರದ ಧೋರಣೆ ಖಂಡಿಸಿ ಸ್ಪೀಕರ್ ಪೀಠ ಬಿಟ್ಟು ಹೊರ ಹೋಗಿದ್ದಾರೆ. ಇದು ಆಘಾತಕಾರಿಯಾಗಿದ್ದು, ಸಿಎಂ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. 40 ದಿನದ ಅಧಿವೇಶನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರವೇ ಬರುವುದಿಲ್ಲ. ಸ್ಪೀಕರ್ ತೆಗೆದುಕೊಂಡಿರುವ ನಿರ್ಣಯಕ್ಕೆ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
For More Updates Join our WhatsApp Group :




