ಸೇತುವೆಗಳು ದುಸ್ಥಿತಿಯಲ್ಲ, ರೈತರಿಗೆ ಭೂ ಪರಿಹಾರ ವಿಲ್ಲ, ಸದನದಲ್ಲಿ ಗರ್ಜಿಸಿದ ಶಾಸಕ
ಬೆಂಗಳೂರು : ನೈಸ್ ರಸ್ತೆಯ ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬಜೆಟ್ ಅಧಿವೇಶನದಲ್ಲಿ ಶಾಸಕ ಎಸ್ಟಿ ಸೋಮಶೇಖರ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹೊಸೂರು ರಸ್ತೆಯಿಂದ ಮಾಗಡಿ ರಸ್ತೆ ವರೆಗೆ ನೈಸ್ ರಸ್ತೆಯನ್ನು ಸರ್ಕಾರ ತಕ್ಷಣವೇ ವಶಕ್ಕೆ ಪಡೆಯಬೇಕು ಎಂದು ಅವರು ಸದನದಲ್ಲಿ ಆಗ್ರಹಿಸಿದರು. ಈ ಹಿಂದೆ ಇದೇ ವಿಷಯದ ಕುರಿತು ಪ್ರಶ್ನೆ ಎತ್ತಿದಾಗ ತನಿಖೆಗೆ ಆದೇಶ ನೀಡಲಾಗಿದ್ದರೂ, ನೈಸ್ ರಸ್ತೆಯ ಸೇತುವೆಗಳ ಸ್ಥಿತಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು 30–35 ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ನೀಡಿದ ಭೂಮಾಲೀಕರಿಗೆ ಇನ್ನೂ ಪರಿಹಾರ ನಿವೇಶನಗಳನ್ನು ನೀಡಲಾಗಿಲ್ಲ. ನೈಸ್ ಕಂಪನಿಯ ನಿರ್ವಹಣೆ ಹಾಗೂ ವರ್ತನೆ ಸರಿಯಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದು ಅವರು ಹೇಳಿದರು.
ನೈಸ್ ರಸ್ತೆಯಲ್ಲಿ ಪ್ರತಿದಿನ ಸುಮಾರು 10 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗುತ್ತಿದೆ. ಇಷ್ಟು ದೊಡ್ಡ ಆದಾಯವಿದ್ದರೂ ರಸ್ತೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ವಿಶೇಷವಾಗಿ 25–30 ವರ್ಷಗಳ ಹಿಂದೆ ನಿರ್ಮಿಸಲಾದ ಕೆಲವು ಸೇತುವೆಗಳು ದುಸ್ಥಿತಿಯಲ್ಲಿದ್ದು, ಸ್ಕೂಟರ್ ಸಂಚಾರಕ್ಕೂ ಯೋಗ್ಯವಾಗಿಲ್ಲ. ತಮ್ಮ ಕ್ಷೇತ್ರದಲ್ಲಿ ಮಾತ್ರವೇ ಎಂಟು ಸೇತುವೆಗಳು ಅಪಾಯಕರ ಸ್ಥಿತಿಯಲ್ಲಿ ಇರುವುದಾಗಿ ಸೋಮಶೇಖರ್ ಹೇಳಿದರು.
ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಸೋಮಶೇಖರ್ ಮಾತಿಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ನೈಸ್ ಸಂಸ್ಥೆಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ ಸಂಸ್ಥೆಯಿಂದ ಸರ್ಕಾರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
ಈ ವಿಚಾರವನ್ನು ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿದೆ. ಉಪಸಮಿತಿ ನೀಡುವ ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
For More Updates Join our WhatsApp Group :




