ಶಿವಾನಂದ ತಗಡೂರು: ಡಿ.ವಿ.ಜಿ ಅವರು ಪತ್ರಕರ್ತರ ಹಿತರಕ್ಷಣೆಗೆ 95 ವರ್ಷಗಳ ಹಿಂದೆ ಸಂಕಲ್ಪಿಸಿದ್ದು
ಬೆಂಗಳೂರು: ಆಧುನಿಕ ಕನ್ನಡ ಸಾಹಿತ್ಯದ ಸರ್ವಜ್ಞ, ಸಾಹಿತ್ಯ ದಿಗ್ಗಜ ಡಿ.ವಿ. ಗುಂಡಪ್ಪನವರು ಕೇವಲ ಸಾಹಿತಿಯಷ್ಟೇ ಅಲ್ಲದೆ ಪತ್ರಕರ್ತರ ಹಿತರಕ್ಷಣೆಗಾಗಿ 95 ವರ್ಷಗಳ ಹಿಂದೆಯೇ ಸಂಘಟನೆಯನ್ನು ಕಟ್ಟಿದ ದೂರದರ್ಶಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ನಗರದಲ್ಲಿ ನಡೆದ ಬೆಂಗಳೂರು ಜಿಲ್ಲಾ ಘಟಕದ ನೂತನ ಕಚೇರಿ ಪೂಜೆ ಹಾಗೂ ಡಿ.ವಿ.ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಿ.ವಿ.ಜಿ ಅವರು ಅಂದು ಹಾಕಿಕೊಟ್ಟ ಅಡಿಪಾಯದ ಮೇಲೆ ಇಂದು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ ಹೆಮ್ಮರವಾಗಿ ಬೆಳೆದಿದೆ. ಸುಮಾರು 10,000 ಸದಸ್ಯರನ್ನು ಹೊಂದಿರುವ ಇದು ದೇಶದ ಅತಿದೊಡ್ಡ ಸಂಘಟನೆಗಳಲ್ಲಿ ಒಂದಾಗಿದೆ. ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಸಮಿತಿಯ ಶಿಫಾರಸಿನ ಮೇರೆಗೆ ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ಸಂಘಕ್ಕೆ ಮರುನಾಮಕರಣ ಮಾಡಲಾಗಿದೆ ಎಂದು ಹೇಳುವ ಮೂಲಕ ಇತಿಹಾಸವನ್ನು ತಗಡೂರು ಸ್ಮರಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ಭೋಪಯ್ಯ ಭಾಗವಹಿಸಿದ್ದರು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಬೆಂಗಳೂರು ನಗರ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷರಾದ ಎಸ್.ಸೋಮಶೇಖರ ಗಾಂಧಿ ಸ್ವಾಗತಿಸಿದರು. ಬೆಂಗಳೂರು ನಗರ ಜಿಲ್ಲೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರವೀಶ್ ವಂದನಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಘಟಕದ ಕಚೇರಿಯಲ್ಲಿ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿದ ನೂತನ ಪದಾಧಿಕಾರಿಗಳು ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು.
For More Updates Join our WhatsApp Group :




