ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ವಂಚನೆ ಆರೋಪ.

ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ವಂಚನೆ ಆರೋಪ.

ಕೋಟಿ ಕೋಟಿ ಹಣ ದುರುಪಯೋಗ?

ಬೆಂಗಳೂರು : ಬೆಂಗಳೂರು  ಉತ್ತರ ತಾಲೂಕಿನ ಶೆಟ್ಟಿಹಳ್ಳಿಯಲ್ಲಿರುವ ಪ್ರತಿಷ್ಠಿತ ಪ್ರಿನ್ಸ್ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಕೋಟಿ ಕೋಟಿ ಹಣ ವಂಚನೆ ಆರೋಪ ಕೇಳಿಬಂದಿದೆ. ಸುಮಾರು 700 ಫ್ಲಾಟ್‌ಗಳಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಅಸೋಸಿಯೇಷನ್ ಸದಸ್ಯರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ವಕೀಲೆ ನಿಶಾ ಎಂಬವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಲಕರ್ಣಿ, ಕಾರ್ಯದರ್ಶಿ ಅಲೆಕ್ಸ್, ಖಜಾಂಚಿ ಪ್ರವೀಣ್ ನಾಯ್ಕರ್ ಸೇರಿದಂತೆ ಒಟ್ಟು 18 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಾಹಿತಿಯ ಪ್ರಕಾರ, ಪ್ರತಿ ಫ್ಲಾಟ್‌ನಿಂದ ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿ ಸಂಗ್ರಹಿಸಲಾಗುತ್ತಿದ್ದು, 700 ಫ್ಲಾಟ್‌ಗಳಿಂದ ಒಟ್ಟಾರೆ ಸುಮಾರು 3.6 ಕೋಟಿ ರೂಪಾಯಿ ವಸೂಲಿ ಮಾಡಲಾಗುತ್ತದೆ. ಆದರೆ, ಈ ಹಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಬಳಸದೇ, ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ಸುಮಾರು 1.73 ಕೋಟಿ ರೂಪಾಯಿ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಖರ್ಚುಗಳನ್ನು ತಪ್ಪಾಗಿ ತೋರಿಸಲಾಗಿದೆ. ಉದಾಹರಣೆಗೆ; ವಾಟರ್‌ಮ್ಯಾನ್‌ಗೆ ಅನಗತ್ಯವಾಗಿ 2 ಲಕ್ಷ ರೂಪಾಯಿ ನೀಡಲಾಗಿದೆ ಎಂದು ದಾಖಲಿಸಿರುವುದು ಗಮನಕ್ಕೆ ಬಂದಿದೆ. ಜೊತೆಗೆ, ಆಡಿಟ್ ಖರ್ಚನ್ನು ಒಂದು ವರ್ಷ 35 ಲಕ್ಷ ರೂಪಾಯಿ, ಮತ್ತೊಂದು ವರ್ಷ 24 ಲಕ್ಷ ರೂಪಾಯಿ ಎಂದು ತೋರಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಟ್ಟಾರೆ, ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ವಂಚನೆ ಆರೋಪ ಕೇಳಿಬಂದಿರುವುದು ನಿವಾಸಿಗಳಲ್ಲಿ ಆತಂಕ ಮತ್ತು ಅಸಮಾಧಾನ ಉಂಟುಮಾಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *