ಶಾಸಕರಿಂದ 4–5 ಟಿಕೆಟ್ ಬೇಡಿಕೆ, ಸರ್ಕಾರಕ್ಕೆ ಮನವಿ.
ಬೆಂಗಳೂರು: ಇದೇ ಮಾರ್ಚ್ 28ರಿಂದ ಐಪಿಎಲ್ ಹಬ್ಬ ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೊಂದೆಡೆ ಐಪಿಎಲ್ ಟಿಕೆಟ್ ಗೆ ಬೇಡಿಕೆ ಹೆಚ್ಚಾಗಿದೆ. ಈ ಸಂಬಂಧ ಬಜೆಟ್ ಅಧಿವೇಶನದಲ್ಲೂ ಚರ್ಚೆಯಾಗಿದೆ. ಹೌದು.. ಐಪಿಎಲ್ ಟಕೆಟ್ ಸಂಬಂಧ ಆಡಳಿತರೂಢ ಹಾಗೂ ವಿಪಕ್ಷ ಶಾಸಕರು ಐಪಿಎಲ್ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಶಾಸಕರಿಗೆ ಕನಿಷ್ಠ 4 ರಿಂದ 5 ಟಿಕೆಟ್ ಕೊಡಿಸಿ ಎಂದು ವಿಧಾನಸಭೆಯಲ್ಲಿಂದು ಸದಸ್ಯರು ಪಕ್ಷಾತೀತವಾಗಿ ಸ್ಪೀಕರ್ ಯುಟಿ ಖಾದರ್ ಮುಂದೆ ಬೇಡಿಕೆ ಇಟ್ಟಿದ್ದಾರೆ.
KSCA ಮುಂದೆ ಅಂಗಲಾಚುವ ಪರಿಸ್ಥಿತಿ
ಉದ್ದೇಶಿತ ಸ್ಟೇಡಿಯಂ ಸಂಬಂಧ ನಡೆದ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶಾಸಕರಿಗೆ ಅಗೌರವವಾಗುತ್ತಿದೆ ಮತ್ತು ಸರಿಯಾಗಿ ಟಿಕೆಟ್ ಸಿಗುತ್ತಿಲ್ಲ. ಮೊನ್ನೆ 11 ಜನ ಕಾಲ್ತುಳಿತದಲ್ಲಿ ಸತ್ತಿದ್ದಾರೆ. ಮತ್ತೊಂದು ಸ್ಟೇಡಿಯಂ ಬೇಡ. ಚಿನ್ನಸ್ವಾಮಿ ಸ್ಟೇಡಿಯಂ ಜಾಗ ನಮ್ಮದು. ಅಲ್ಲಿ ಕ್ರಿಕೆಟ್ ಟ್ರೈನಿಂಗ್ ಮಾಡಿ ಎಂದು ಜಾಗ ನೀಡಿದ್ದೇವೆ. ಅವರು ಏನು ತರಬೇತಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅಶೋಕ್, ಒಂದು ಟಿಕೆಟ್‌ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (KSCA) ಮುಂದೆ ಅಂಗಲಾಚುವ ಪರಿಸ್ಥಿತಿ ಇದೆ. ನಮ್ಮ ಹೆಸರಿನಲ್ಲಿರುವ ಟಿಕೆಟ್‌ಗಳನ್ನು ಮಾರಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ಟಿಕೆಟ್ ನೀಡುವ ಬಗ್ಗೆ ಡಿಕೆಶಿ ಹೇಳಿದ್ದೇನು?
ಕೊನೆಗೆ ಡಿಕೆಶಿ ಪ್ರತಿಕ್ರಿಯಿಸಿ, ಖಂಡಿತವಾಗಿ ಅವರನ್ನು ಕರೆಸಿ ಮಾತಾಡುತ್ತೇವೆ. ನಾನೂ ಕೆಎಸ್‌ಸಿಎ ಸದಸ್ಯ. ಅವರನ್ನು ಕರೆಸಿ ಶಾಸಕರ ಟಿಕೆಟ್ ಬಗ್ಗೆ ಮಾತಾಡುತ್ತೇನೆ. ಶಾಸಕರಿಗೆ ಎಲ್ಲ ಹಕ್ಕೂ ಇದೆ. ಖಾದರ್ ಆದೇಶ, ಸಾಮ್ರಾಟ್ ಅಶೋಕ್ ಮನವಿ ಇದೆ ಎಂದು ಹೇಳುತ್ತೇನೆ ಎಂದು ಉತ್ತರಿಸಿ ಚರ್ಚೆಗೆ ತೆರೆ ಎಳೆದರು.
For More Updates Join our WhatsApp Group :



