ಒಂದೇ ದಿನ ಪತಿ-ಪತ್ನಿ ಸಾ*ಗೀಡಾಗಿದ್ದು, ಮೂವರು ಮಕ್ಕಳು ಅನಾಥ.

ಒಂದೇ ದಿನ ಪತಿ-ಪತ್ನಿ ಸಾ*ಗೀಡಾಗಿದ್ದು, ಮೂವರು ಮಕ್ಕಳು ಅನಾಥ.

ಬೆಳಗಾವಿ: ಪತ್ನಿ ಕ್ರಿಮಿನಾಶಕ ಸೇವಿಸಿ ಆತ್ಮ*ತ್ಯೆ, ದಾರುಣ ರಸ್ತೆ ಅಪಘಾತದಲ್ಲಿ ಪತಿ ಸಾವನ್ನಪ್ಪಿದ ಘಟನೆ.

ಬೆಳಗಾವಿ: ಜಿಲ್ಲೆಯಲ್ಲಿ ಒಂದೇ ದಿನ ಪತಿ-ಪತ್ನಿಸಾವನ್ನಪ್ಪಿರುವ ಘಟನೆ ನಡೆದಿದ್ದು, ದಂಪತಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ. ಪತ್ನಿ ಕ್ರಿಮಿನಾಶಕ ಸೇವಿಸಿ ಆತ್ಮ*ತ್ಯೆ ಮಾಡಿಕೊಂಡ ವಿಷಯ ತಿಳಿದ ಪತಿ, ಬೈಕ್​ನಲ್ಲಿ ಬರುವಾಗ ಅಪಘಾತಕ್ಕೀಡಾಗಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾನೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಪತ್ನಿ

ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಕರೆಪ್ಪ (36) ಹಾಗೂ ಅವರ ಪತ್ನಿ ಮಧುರಾ (30) ಮೃತ ದಂಪತಿ. ಹಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಧುರಾ, ನೋವು ತಾಳಲಾರದೆ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರೂ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ.

ಪತ್ನಿಯ ಸಾವಿನ ಸುದ್ದಿ ತಿಳಿದು ಆಘಾತಗೊಂಡ ಕರೆಪ್ಪ, ಬೈಕ್‌ನಲ್ಲಿ ಆಸ್ಪತ್ರೆಗೆ ಧಾವಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವಸರದಲ್ಲಿ ಬರುತ್ತಿದ್ದ ವೇಳೆ ಬಸ್ ಚಕ್ರಕ್ಕೆ ಸಿಲುಕಿದ ಪರಿಣಾಮ ಸ್ಥಳದಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೂವರು ಮಕ್ಕಳು ಅನಾಥ!

ಒಂದೇ ದಿನ ದಂಪತಿಗಳಿಬ್ಬರ ಸಾವಿನಿಂದ ಕುಟುಂಬದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ದಂಪತಿಗೆ ಒಂದು ಹೆಣ್ಣು ಮಗು ಹಾಗೂ ಇಬ್ಬರು ಗಂಡು ಮಕ್ಕಳಿದ್ದು, ಇದೀಗ ಅವರು ಅನಾಥರಾಗಿದ್ದಾರೆ.

ಕರೆಪ್ಪ ಮತ್ತು ಮಧುರಾ ದಂಪತಿ ಸುಮಾರು ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ನಿನ್ನೆಯಷ್ಟೇ ತಮ್ಮ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸಿ, ಮನೆಗೆ ಬೇಕಾದ ಸಾಮಗ್ರಿಗಳನ್ನು ಕೂಡ ತಂದಿದ್ದರು. ಮಧುರಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ, ತೀವ್ರ ನೋವಿನ ಹಿನ್ನೆಲೆ ಈ ರೀತಿಯ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *