ಚುನಾವಣಾ ಆಯೋಗದ ಪತ್ರದ ಮೂಲಕ ಬಡವರು, ನಿರುದ್ಯೋಗಿ ಯುವಕರ ಮೇಲೆ ದಾಳಿ.
ದಾವಣಗೆರೆ : ಗ್ಯಾರಂಟಿ ಯೋಜನೆ ಹಣ ಬಿಡುಗಡೆಗೆ ಆಕ್ಷೇಪಿಸಿ ಚುನಾವಣಾ ಆಯೋಗದ ಮೂಲಕ ಪತ್ರ ಬರೆದಿದ್ದು, ಚುನಾವಣಾ ಆಯೋಗದ ಮೂಲಕ ಈ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿಯು ಷಡ್ಯಂತ್ರ ರೂಪಿಸಿದೆ. ಆಮೂಲಕ ಬಡವರು ಹಾಗೂ ನಿರುದ್ಯೋಗಿ ಯುವಕರ ಮೇಲೆ ದಾಳಿ ಮಾಡಿದ್ದು, ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ದಾವಣಗೆರೆಯ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶಕ್ಕೆ ಮಾದರಿಯಾಗುವ ಯೋಜನೆ ಜಾರಿಗೆ ತಂದಿದ್ದೇವೆ. ಪ್ರಧಾನಮಂತ್ರಿಗಳು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಜಾರಿಯಾಗಿಲ್ಲ, ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಕೇಳಿದೆ. ಅಷ್ಟು ದೊಡ್ಡ ಸ್ಥಾನದಲ್ಲಿರುವವರಿಗೆ ಈ ಬಗ್ಗೆ ಮಾಹಿತಿ ಇರುತ್ತದೆ ಎಂದು ಭಾವಿಸಿದ್ದೆ. ನಮ್ಮ ಕಾರ್ಯಕ್ರಮವನ್ನು ಟೀಕೆ ಮಾಡಿದ ಅವರೇ ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡಿದ್ದಾರೆ” ಎಂದು ತಿಳಿಸಿದರು.
“ಪಕ್ಷದ ಎಲ್ಲಾ ಮುಖಂಡರು ಸೇರಿ ಈ ಕ್ಷೇತ್ರದಲ್ಲಿ ಒಬ್ಬ ಯುವಕ, ವಿದ್ಯಾವಂತ ಹಾಗೂ ಪ್ರಜ್ಞಾವಂತನಿಗೆ ಟಿಕೆಟ್ ನೀಡಲು ತೀರ್ಮಾನ ಮಾಡಿದ್ದೇವೆ. ಇವರ ತಾಯಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇಲ್ಲವಾದರೂ ನಾವೇ ಬಲವಂತ ಮಾಡಿ ಸ್ಪರ್ಧೆ ಮಾಡುವಂತೆ ಮಾಡಿ ಗೆಲ್ಲಿಸಲಾಗಿದೆ. ಅವರು ಲೋಕಸಭೆಯಲ್ಲಿ ಉತ್ತಮವಾಗಿ ಕೆಲಸ ಮಾಡಿ ನಮ್ಮ ಪಕ್ಷದ ಆಸ್ತಿಯಾಗಿ ಬೆಳೆಯುತ್ತಿದ್ದಾರೆ. ಶಿವಶಂಕರಪ್ಪನವರು ಬಡವರಿಗಾಗಿ ಉಚಿತ ಸಭಾಂಗಣಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಯಾರು ಎಷ್ಟೇ ಶ್ರೀಮಂತರಾಗಬಹುದು. ಆದರೆ ಜನರಿಂದ ಕೊಡುಗೈ ದಾನಿ ಎಂದು ಕರೆಸಿಕೊಳ್ಳುವುದು ಬಹಳ ವಿಶೇಷವಾದದ್ದು. ಇದನ್ನು ನಮ್ಮ ಅಭ್ಯರ್ಥಿ ಮುಂದುವರಿಸಿಕೊಂಡು ಹೋಗಲಿದ್ದಾರೆ” ಎಂದು ಭರವಸೆ ನೀಡಿದರು.
For More Updates Join our WhatsApp Group :




