ಆಟವಾಡುವಾಗ ಮೊದಲನೇ ಮಹಡಿಯಿಂದ ಬಿದ್ದ ಮಗುವಿಗೆ ಗಂಭೀರ ಗಾಯ.
ಬೆಂಗಳೂರು : ಆಟವಾಡುವಾಗ ಮೊದಲನೇ ಮಹಡಿಯಿಂದ ಬಿದ್ದು ಮಗುವೊಂದು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ನಾಯಂಡಳ್ಳಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಪರಿಣಾಮ ಒಂದೂವರೆ ವರ್ಷದ ಹೆಣ್ಣು ಮಗು ಸಹನಾಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏಪ್ರಿಲ್ 6ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಹಡಿಯಿಂದ ಹೆಣ್ಣು ಮಗು ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಗುವಿನ ಆರೋಗ್ಯದಲ್ಲಿ ಚೇತರಿಕೆ
ಇನ್ನು ಗಂಭೀರ ಗಾಯಗೊಂಡಿರುವ ಮಗು ಸಹನಾ ನವೀನ್ ಮತ್ತು ಜಯಶ್ರೀ ದಂಪತಿಯದ್ದಾಗಿದ್ದು, ಮಗಳ ಸದ್ಯದ ಆರೋಗ್ಯದ ಬಗ್ಗೆ ತಂದೆ ನವೀನ್ ಮಾಹಿತಿ ನೀಡಿದ್ದಾರೆ. ಬಸವನಗುಡಿಯ ರಂಗದೊರೆ ಸ್ಮಾರಕ ಆಸ್ಪತ್ರೆಯ ಐಸಿಯುನಲ್ಲಿ ಸಹನಾಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತಲೆ ಭಾಗಕ್ಕೆ ಸ್ವಲ್ಪ ಗಾಯವಾಗಿದ್ದು ಬಿಟ್ಟರೆ ಮತ್ತೆಲ್ಲಿಯೂ ಏನೂ ಆಗಿಲ್ಲ. ತಲೆಗೆ ಮೂರು ಹೊಲಿಗೆ ಹಾಕಲಾಗಿದ್ದು, ಸಹನಾ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆ ನಡೆದಿದ್ದೇಗೆ?
ಮಗುವಿನ ಜೊತೆಗೇ ಇದ್ದ ತಾಯಿ ಜಯಶ್ರೀ ಹಾಲು ಕಾಯಿಸಲು ಇಟ್ಟಿದ್ದರು. ಹೀಗಾಗಿ ಹಾಲು ಉಕ್ಕಿತಾ ಎಂದು ನೋಡಿ ಬರಲು ಅರೆಕ್ಷಣ ಅವರು ತೆರಳಿದ್ದರು. ಅಷ್ಟರಲ್ಲಿ ಮಗು ಸಹನಾ ಮಹಡಿಯಿಂದ ಬಿದ್ದು ಗಾಯಗೊಂಡಿದೆ. ಹೊರಗಡೆ ಇದ್ದ ಚೇರ್ ಹತ್ತಿದ ಪರಿಣಾಮ ಮಗುವಿಗೆ ಆಯತಪ್ಪಿದೆ. ಮಗು ಕೆಳಗಡೆ ಬಿದ್ದಿದ್ದನ್ನು ಕಂಡ ರಸ್ತೆಯಲ್ಲಿ ತೆರಳುತ್ತಿದ್ದ ಜನ ಕಿರುಚಾಡುತ್ತಿದ್ದಂತೆ ಹೊರಬಂದು ಮಗುವಿನ ಸ್ಥಿತಿ ಕಂಡ ಜಯಶ್ರೀ ಲೋ ಬಿಪಿ ಉಂಟಾಗಿ ಅಸ್ವಸ್ಥರಾಗಿದ್ದರು. ಸದ್ಯಕ್ಕೆ ಅವರೂ ಚೇತರಿಸಿಕೊಂಡಿದ್ದು, ದಂಪತಿಗೆ ಸಹನಾ ಏಕೈಕ ಮಗು ಎನ್ನಲಾಗಿದೆ. ಮಗು ಸಹಾನಳ ತಂದೆ ನವಿನ್ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ವ್ಯಕ್ತಿ ಎಂಬ ವಿಚಾರವೂ ಈ ವೇಳೆ ಗೊತ್ತಾಗಿದೆ.
For More Updates Join our WhatsApp Group :




