ಸ್ಮರಣಶಕ್ತಿ ಕಳೆದುಕೊಂಡ ಪ್ರಿಯಾ ಸರೋಜ್ – ಪತಿಯ ವಿರುದ್ಧ ಕಿರುಕುಳ ಆರೋಪ
ವಾರಾಣಸಿ : ವಾಲಿಬಾಲ್ ಕೋರ್ಟ್ನಲ್ಲಿ ಎದುರಾಳಿಗಳನ್ನು ಮಣಿಸುತ್ತಿದ್ದ ಪ್ರಿಯಾ ಸರೋಜ್, ಇಂದು ಹಾಸಿಗೆಯ ಮೇಲೆ ಪ್ರಜ್ಞೆಯಿಲ್ಲದೆ ಮಲಗಿದ್ದಾರೆ. ಅವರ ಸ್ಮರಣಶಕ್ತಿ ಸಂಪೂರ್ಣವಾಗಿ ಹೋಗಿದೆ, ಮಾತು ಮರೆಯಾಗಿದೆ. ಅವರ ಈ ದುಸ್ಥಿತಿಗೆ ಗಂಡನೇ ಕಾರಣ ಎಂಬ ಆಘಾತಕಾರಿ ಸತ್ಯವನ್ನು ಅವರ ತಾಯಿ ನಿಶಾ ಈಗ ಕಣ್ಣೀರಿನೊಂದಿಗೆ ಬಿಚ್ಚಿಟ್ಟಿದ್ದಾರೆ.
ಫೆಬ್ರವರಿ 2024 ರಲ್ಲಿ ವಾರಾಣಸಿಯ ಪರಮಾನಂದಪುರದ ಪ್ರಿಯಾ ಸರೋಜ್ ಅವರನ್ನು ಬಿಎಲ್‌ಡಬ್ಲ್ಯೂ ನಿವಾಸಿ, ಜೆಇ ಆಗಿ ಕೆಲಸ ಮಾಡುತ್ತಿದ್ದ ಅಮಿತ್ ವರ್ಮಾ ಅವರೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮಗಳ ಜೀವನ ಸುಖವಾಗಿರಲಿ ಎಂದು ಪೋಷಕರು ಹಾರೈಸಿದ್ದರು. ಮದುವೆಯ ನಂತರ ಅಮಿತ್‌ಗೆ ಗೋರಖ್‌ಪುರಕ್ಕೆ ವರ್ಗಾವಣೆಯಾದಾಗ ಪ್ರಿಯಾ ಕೂಡ ಪತಿಯೊಂದಿಗೆ ತೆರಳಿದ್ದರು.
ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕ್ರಮೇಣ ಅಮಿತ್ ತನ್ನ ಅಸಲಿ ರೂಪ ತೋರಿಸಲು ಆರಂಭಿಸಿದ್ದ. ಪ್ರಿಯಾ ಹೆಸರಿನಲ್ಲಿದ್ದ ಜಮೀನನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಮತ್ತು ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಶುರುಮಾಡಿದ್ದ. ತನ್ನ ನೋವನ್ನು ಯಾರಿಗೂ ಹೇಳಿಕೊಳ್ಳದೆ ಪ್ರಿಯಾ ಸಹಿಸಿಕೊಂಡಿದ್ದಳು. ಆದರೆ ಅಳಿಯನ ಕಿರುಕುಳ ಮಿತಿಮೀರಿತ್ತು, ಎಂದು ತಾಯಿ ನಿಶಾ ಆರೋಪಿಸಿದ್ದಾರೆ.
ಮದುವೆಯಾದ 14 ತಿಂಗಳಿಗೆ ಪ್ರಿಯಾ ಅವರ ತಾಯಿಗೆ ಒಂದು ಕರೆ ಬಂತು. ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದರು. ಗಾಬರಿಯಿಂದ ಗೋರಖ್‌ಪುರಕ್ಕೆ ಓಡಿಹೋದ ತಾಯಿಗೆ ಕಂಡದ್ದು ಮತ್ತೊಂದು ಆಘಾತ. ಪ್ರಿಯಾ ಜೀವಂತವಾಗಿದ್ದಳು, ಆದರೆ ಕೋಮಾದಲ್ಲಿದ್ದಳು.
ಅಲ್ಲಿಂದ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಫಲ ಸಿಗಲಿಲ್ಲ. ಚಿಕಿತ್ಸೆಯ ಸಮಯದಲ್ಲಿ ಪ್ರಿಯಾ ಕ್ರಮೇಣ ತನ್ನ ಸ್ಮರಣಶಕ್ತಿ ಮತ್ತು ಮಾತನಾಡುವ ಶಕ್ತಿಯನ್ನು ಕಳೆದುಕೊಂಡಳು. ಒಂದು ಕಾಲದಲ್ಲಿ ಕ್ರೀಡಾಂಗಣದಲ್ಲಿ ಚೈತನ್ಯದ ಬುಗ್ಗೆಯಾಗಿದ್ದ ಈಕೆ ಈಗ ತನ್ನ ಗುರುತನ್ನೇ ಮರೆತು ಹೋಗಿದ್ದಾಳೆ.
For More Updates Join our WhatsApp Group :




