ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಸಮಾನ ಮತದಾನ
ಬೆಂಗಳೂರು: ರಾಜ್ಯದ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಗುರುವಾರ ಮುಕ್ತಾಯಗೊಂಡಿದೆ. ಕಳೆದ 15 ದಿನಗಳಿಂದ ನಡೆದ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದ್ದು, ಮತದಾನವೂ ಮುಗಿದಿದೆ. ಮತದಾರ ಪ್ರಭು ತನ್ನ ನಿರ್ಧಾರವನ್ನು ಮತಯಂತ್ರದಲ್ಲಿ ದಾಖಲಿಸಿದ್ದಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಹುತೇಕ ಸಮಾನ ಪ್ರಮಾಣದ ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.
ಮತದಾನದ ಶೇಕಡಾವಾರು ವಿವರ
- ದಾವಣಗೆರೆ ದಕ್ಷಿಣ: ಶೇ 68.55 ರಷ್ಟು ಮತದಾನ ದಾಖಲಾಗಿದೆ.
- ಬಾಗಲಕೋಟೆ: ಶೇ 68.73 ರಷ್ಟು ಮತದಾನವಾಗಿದೆ.
ಹಣ ಮತ್ತು ಕೋಳಿ ಹಂಚಿಕೆ ಆರೋಪ
ಮತದಾನದ ನಡುವೆಯೇ ಮತದಾರರಿಗೆ ಆಮಿಷ ಒಡ್ಡಿದ ಹಲವು ಪ್ರಕರಣಗಳು ವರದಿಯಾಗಿವೆ. ಬಾಗಲಕೋಟೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಜಾಫರ್ ಬೇಫಾರಿ ಎಂಬಾತ ಹಣ ಹಂಚುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ನವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಾಂಬೆ ಕಾಲೋನಿಯಲ್ಲಿ ಮಹಿಳೆಯೊಬ್ಬರು ತನಗೆ ಕಾಂಗ್ರೆಸ್ನವರು 500 ರೂ. ನೀಡಿದ್ದಾರೆ ಎಂದು ಹಣ ಪ್ರದರ್ಶಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಇತ್ತ ಹಳೇಪೇಟೆಯಲ್ಲಿ ಹಣ ಹಂಚಲು ಮನೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ಹೊರಗಿನಿಂದ ಲಾಕ್ ಮಾಡಿದ್ದರೂ, ಅವರು ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದಾರೆ.
ಇನ್ನು ದಾವಣಗೆರೆಯಲ್ಲಿ ವಿಭಿನ್ನ ಆಮಿಷದ ಆರೋಪ ಕೇಳಿಬಂದಿದೆ. ಎಸ್ಪಿಎಸ್ ನಗರದಲ್ಲಿ ಹಣ ಹಂಚಿಕೆಯ ವಿಡಿಯೋ ವೈರಲ್ ಆಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ನವರು ಮತಕ್ಕಾಗಿ ‘ಕೋಳಿ’ ಹಂಚಿದ್ದಾರೆ ಎಂದು ಬಾಲಕರು ಹೇಳುತ್ತಿರುವ ವಿಡಿಯೋವನ್ನು ಬಿಜೆಪಿ ಮುಖಂಡ ವಿನಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
For More Updates Join our WhatsApp Group :




