ಜಾಗತಿಕ ತಂತ್ರಜ್ಞಾನ ಸಹಕಾರಕ್ಕೆ ಹೊಸ ಮಾನದಂಡ
ಬೆಂಗಳೂರು : ಜಾಗತಿಕ ನಾವೀನ್ಯತಾ ಪರಿಸರದಲ್ಲಿ ಭಾರತದ ಪ್ರವೇಶಕ್ಕೆ ಹೆಬ್ಬಾಗಿಲಿನಂತೆ ಕರ್ನಾಟಕ ರಾಜ್ಯವು ಹೊರಹೊಮ್ಮಿದ್ದು. ಇದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ದಿಸೆಯಲ್ಲಿ ರಾಜ್ಯ ಸರ್ಕಾರವು ಜಾಗತಿಕ ನಾವೀನ್ಯತಾ ಮೈತ್ರಿಕೂಟದ (ಜಿಐಎ-2.0)- ಎರಡನೆ ಆವೃತ್ತಿಯನ್ನು ದೆಹಲಿಯಲ್ಲಿ ನಡೆಯಲಿರುವ ರಾಜತಾಂತ್ರಿಕರ ಜೊತೆಗಿನ ಸಂವಾದ ಸಮಾವೇಶದಲ್ಲಿ ಅನಾವರಣ ಮಾಡಲಿದೆ.
ಇದೇ 17ರಂದು ನವದೆಹಲಿಯಲ್ಲಿ ಬ್ರಿಡ್ಜ್ ಬೆಂಗಳೂರು- 2026 – ರಾಜತಾಂತ್ರಿಕರ ಜತೆ ಸಮಾಲೋಚನೆ ಕಾರ್ಯಕ್ರಮ ನಡೆಯಲಿದ್ದು, ಮುಂದಿನ ತಲೆಮಾರುಗಳಿಗೆ ಅನುಕೂಲವಾಗುವಂತೆ ಕ್ಷೇತ್ರವಾರು ಸಹಭಾಗಿತ್ವ ಸಾಧಿಸುವಿಕೆ, ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸುವುದು ಮತ್ತು ಇನ್ನಷ್ಟು ರಚನಾತ್ಮಕ ಮತ್ತು ಎದ್ದಿಕಾಣುವಂತಹ ಪ್ರತಿಫಲಗಳನ್ನು ನೀಡುವಂತಹ ಸಹಭಾಗಿತ್ವಕ್ಕೆ ಮುಂದಾಗಿದೆ.
ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ ಬಗ್ಗೆ ಮಾಹಿತಿ ನೀಡಿದರು. ‘ಕಳೆದ ಒಂದು ವರ್ಷದಿಂದ ನಾವು ಜಾಗತಿಕ ಕಂಪನಿಗಳ ಜೊತೆಗೆ ಮೈತ್ರಿ ಸಹಭಾಗಿತ್ವ ಸಾಧಿಸುವ ದಿಸೆಯಲ್ಲಿ ಮತ್ತು ಪ್ರತಿಫಲ ಆಧಾರಿತ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಈ ಯೋಜನೆಗಳು ಈಗಾಗಲೇ ಸಾಕಷ್ಟು ಫಲ ನೀಡಿವೆ. ಜಾಗತಿಕ ನಾವೀನ್ಯತಾ ಮೈತ್ರಿಕೂಟದ ನೆರವಿನೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಇನ್ನಷ್ಟು ರಹದಾರಿಗಳನ್ನು ಸೃಷ್ಟಿಸುತ್ತಿದ್ದು, ರಾಜ್ಯದ ಕಂಪನಿಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಕಲ್ಪಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದೆ’ ಎಂದರು.
ಮುಂದಿನ ಒಂದು ದಶಕದಲ್ಲಿ ರಾಜ್ಯವು ಡೀಪ್ ಟೆಕ್ ಕ್ಷೇತ್ರದಲ್ಲಿ ಅಗ್ರಗಣ್ಯ ರಾಜ್ಯವಾಗಿ ಹೊರಹೊಮ್ಮಬೇಕೆಂಬ ಕನಸನ್ನು ನನಸು ಮಾಡುವ ದಿಸೆಯಲ್ಲಿ ರಾಜ್ಯ ಸರ್ಕಾರವು ಸಂಶೋಧನೆ ಮತ್ತು ಪ್ರತಿಭೆಗಳನ್ನು ಜೋಡಿಸುವ ಕೆಲಸದಲ್ಲಿ ನಿರತವಾಗಿದೆ. ಫಲಿತಾಂಶ ಆಧಾರಿತ ಮತ್ತು ಹೊಸದಾಗಿ ಹೊರಹೊಮ್ಮುತ್ತಿರುವ ಕ್ಷೇತ್ರಗಳೊಂದಿಗೆ ಹಳೆಯ ಉದ್ದಿಮೆಗಳನ್ನು ಜೋಡಿಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದರು.
ನವದೆಹಲಿಯ ಈ ಸಮಾವೇಶವು ಬೆಂಗಳೂರಿನಲ್ಲಿ ಬರುವ ನವೆಂಬರ್ 17ರಿಂದ 19ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್ಗೆ ಪೂರ್ವಭಾವಿಯಾಗಿ ನಡೆಯುತ್ತಿದೆ.
For More Updates Join our WhatsApp Group :




