ಖರ್ಗೆ, ಕಾಂಗ್ರೆಸ್ಸಿಗೆ ಪ್ರಧಾನಿಯವರ ಜನಪ್ರಿಯತೆ ಸಹಿಸಿಕೊಳ್ಳಲು ಆಗುತ್ತಿಲ್ಲ
ಬೆಂಗಳೂರು: ಇಡೀ ವಿಶ್ವವೇ ನರೇಂದ್ರ ಮೋದಿಜೀ ಅವರ ನಾಯಕತ್ವವನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಜೀ ಅವರನ್ನು ಭಯೋತ್ಪಾದಕರೆಂದು ಹೇಳಿದ್ದು ಬಿಜೆಪಿ ಮಾತ್ರವಲ್ಲದೇ ಇಡೀ ದೇಶ ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಉಗ್ರವಾದಿ ಎಂದು ಹೇಳಿದ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು ಏರ್ಪಡಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಖರ್ಗೆಯವರು ಮತ್ತು ಕಾಂಗ್ರೆಸ್ಸಿಗೆ ಪ್ರಧಾನಿಯವರ ಜನಪ್ರಿಯತೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು. ವಿಶ್ವದ 25ಕ್ಕೂ ಹೆಚ್ಚು ರಾಷ್ಟ್ರಗಳು ಮೋದಿಜೀ ಅವರಿಗೆ ತಮ್ಮ ದೇಶದ ಅತ್ಯುನ್ನತ ಗೌರವ ನೀಡಿವೆ ಎಂದು ಗಮನ ಸೆಳೆದರು. ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಇದೇವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಕಾಲದಲ್ಲಿ ಸಂಬಳ ಕೊಡುತ್ತಿಲ್ಲ ಎಂದು ಟೀಕಿಸಿದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಯಾವ ಕಡೆ ಸಾಗುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ತಿಳಿಸಿದರು.
ಇವರು ವಿದೇಶಿ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಇವರಿಬ್ಬರು ಜಾರ್ಜ್ ಸೊರೊಸ್ ಏಜೆಂಟರು ಎಂದು ಟೀಕಿಸಿದರು. ಅವರ ಮಾನಸಿಕತೆಗೆ ತಕ್ಕಂತೆ ಇವರು ಭಾರತದಲ್ಲಿ ಕುಣಿಯುತ್ತಿದ್ದಾರೆ ಎಂದು ಖಂಡಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ಖರ್ಗೆ ಮತ್ತು ಅವರ ಮಗ, ಸೋನಿಯಾ ಗಾಂಧಿಯವರನ್ನು ಮೆಚ್ಚಿಸಲು ಹೀಗೆ ಮಾತನಾಡುತ್ತಿದ್ದಾರಾ ಎಂದು ಕೇಳಿದರು. ಹಿಂದೆ ವಿಷಸರ್ಪಕ್ಕೆ ಹೋಲಿಸಿದ್ದರು ಎಂದು ಖಂಡಿಸಿದರು. ಪ್ರಧಾನಿಯವರನ್ನು ಹೀಗೆ ಹೋಲಿಸಿ ಮಾತನಾಡಿದ್ದರಿಂದ ಕಾಂಗ್ರೆಸ್ಸಿಗೆ 140 ಕೋಟಿ ಜನರ ಶಾಪ ತಟ್ಟಲಿದೆ. ಅದರಿಂದ ಕಾಂಗ್ರೆಸ್ ನಶಿಸಿ ಹೋಗಲಿದೆ ಎಂದು ನುಡಿದರು. ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.
For More Updates Join our WhatsApp Group :




