ಜನಪರವಾಗಿ ಕೆಲಸ ಮಾಡಿದಾಗ ಅಧಿಕಾರಿಗಳ ಸೇವೆಗೆ ಅರ್ಥ ಬರುತ್ತದೆ: DCM

ಜನಪರವಾಗಿ ಕೆಲಸ ಮಾಡಿದಾಗ ಅಧಿಕಾರಿಗಳ ಸೇವೆಗೆ ಅರ್ಥ ಬರುತ್ತದೆ: DCM

ಅಧಿಕಾರಿಗಳನ್ನು ದೇವರ ರೂಪದಲ್ಲಿ ಜನ ನೋಡುತ್ತಾರೆ

ಬೆಂಗಳೂರು : “ಅಧಿಕಾರಿಗಳು ಕೇವಲ ಸೂಟ್ ಬೂಟ್ ಧರಿಸಿದ ಜನರಿಗೆ ಆದ್ಯತೆ ನೀಡಬಾರದು. ಬೆವರು ಹರಿಸಿ, ಭೂಮಿಯನ್ನ ಉತ್ತು, ಬಿತ್ತು ಹಳ್ಳಿಗಳಲ್ಲಿ ಕೆಲಸ ಮಾಡುವ ಜನಸಾಮಾನ್ಯರ, ಕಾರ್ಮಿಕರ ಪರವಾಗಿರಬೇಕು‌. ಅವರ ಬದುಕಿನಲ್ಲಿ ಬದಲಾವಣೆ ತರಬೇಕು. ಕೇವಲ ಗೋಡೆ ಕಟ್ಟಬೇಡಿ. ಗುರಿ ತಲುಪಲು ಸೇತುವೆ ನಿರ್ಮಾಣ ಮಾಡಿ‌ದಾಗ ನಿಮ್ಮ ಸೇವೆಗೆ ಅರ್ಥ ಬರುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಬೆಂಗಳೂರಿನ ಕೆಎಎಸ್ ಅಧಿಕಾರಿಗಳ ಸಂಘದ ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಮಾತನಾಡಿದರು.

“ರಾಜಕಾರಣಿಗಳ ಕಾಲಾವಧಿ ಕೇವಲ ಐದು ವರ್ಷ. ನಾವು ಈ ಸ್ಥಾನಕ್ಕೆ ಬರಬೇಕು ಎಂದರೆ ಎಷ್ಟು ನೀರು ಕುಡಿದಿರುತ್ತೇವೆ, ಏನೇನು ಮಾಡಿರುತ್ತೇವೆ ಎನ್ನುವುದು ನಿಮಗೂ ಗೊತ್ತಿರುತ್ತದೆ. ನೀವು 25- 30 ವರ್ಷಕ್ಕೆ ಅಧಿಕಾರಿಗಳಾಗುತ್ತೀರಿ. ಅವರು, ಇವರು ಯಾರೇ ಬಂದರೂ ಜಾತಿ, ಪ್ರಭಾವ ಬಳಸಿಕೊಂಡು ಮುಂದುವರೆಯುವವರು ನೀವು. ರಾಜಕಾರಣ ನಮಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಯಾವ ಅಧಿಕಾರಿಗಳೂ ಕಡಿಮೆಯಿಲ್ಲ. ಕೆಲವೊಬ್ಬರು ದಡ್ಡರು ಇರಬಹುದು. ಹೇಗೆ ಪ್ರಭಾವ ಬಳಸಿಕೊಳ್ಳುವುದು ಎಂದು ಸುಮ್ಮನಿರಬಹುದು. ಆದರೂ ಅಧಿಕಾರಿಗಳು ಚಾಣಕ್ಯರಿದ್ದೀರಿ” ಎಂದರು.

ಅಧಿಕಾರಿಗಳನ್ನು ದೇವರ ರೂಪದಲ್ಲಿ ಜನ ನೋಡುತ್ತಾರೆ.

“ಅಧಿಕಾರಿಗಳನ್ನು ಜನರು ದೇವರ ರೂಪದಲ್ಲಿ ನೋಡುತ್ತಾರೆ. ತಮ್ಮ ಕಷ್ಟಗಳನ್ನ ಪರಿಹರಿಸುತ್ತಾರೆ ಎನ್ನುವ ನಂಬಿಕೆ ಇಟ್ಟಿರುತ್ತಾರೆ. ದೇವರು ನೀಡಿದ ಅವಕಾಶವನ್ನು ಜನಪರವಾಗಿ ನೀವು ಉಪಯೋಗಿಸಬೇಕು. ನಾವೆಲ್ಲರೂ ಸಾವಿರಾರು ಹೇಳಬಹುದು ಆದರೆ ಕೊನೆಯದಾಗಿ ಕೆಲಸ ಮಾಡುವುದು ನಿಮ್ಮ ಮನಃಸಾಕ್ಷಿ. ಕಲ್ಲು, ಮಣ್ಣುಗಳಿಂದ ಗೋಡೆಯನ್ನೂ ಕಟ್ಟಬಹುದು ಜೊತೆಗೆ ಸೇತುವೆಯನ್ನೂ ನಿರ್ಮಿಸಬಹುದು” ಎಂದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *