507 ಕೋಟಿ ರೂ. ಲಾಭ ಕಂಡ ಸರಕಾರಿ ಉದ್ಯಮ
ಬೆಂಗಳೂರು: ನೂರತ್ತು ವರ್ಷಗಳ ಇತಿಹಾಸವಿರುವ, ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆ.ಎಸ್.ಡಿ.ಎಲ್) 2025-26ನೇ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು ನಡೆಸಿದ್ದು, 507 ಕೋಟಿ ರೂ. ಲಾಭ ಗಳಿಸಿದೆ. ಇದು ಸಂಸ್ಥೆಯ ಪಾಲಿಗೆ ಚಾರಿತ್ರಿಕ ಮೈಲುಗಲ್ಲಾಗಿದ್ದು, ಸಾರ್ವಜನಿಕ ಉದ್ದಿಮೆಗಳ ಸಾಧನೆಯಲ್ಲಿ ಕಿರೀಟಪ್ರಾಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.
ಸಂಸ್ಥೆಯ ಈ ಅಪೂರ್ವ ಸಾಧನೆಯ ಸಂಭ್ರಮಾಚರಣೆಯ ನಿಮಿತ್ತವಾಗಿ ನಗರದ ಖಾಸಗಿ ಹೋಟೆಲಿನಲ್ಲಿ ಏರ್ಪಡಿಸಿದ್ದ ಮೈಸೂರು ಸ್ಯಾಂಡೆಲ್ ನ ಸಾಧನೆಯ ಶಿಖರ ಕಾರ್ಯಕ್ರಮದಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಸ್ಥೆಯು ಮೊದಲ ಒಂದು ಸಾವಿರ ಕೋಟಿ ರೂ.ಗಳ ವಹಿವಾಟನ್ನು ತಲುಪಲು 105 ವರ್ಷ ತೆಗೆದುಕೊಂಡಿತ್ತು. ಆದರೆ, ಅಲ್ಲಿಂದ 2 ಸಾವಿರ ಕೋಟಿ ರೂ. ಮಟ್ಟವನ್ನು ಕೇವಲ ನಾಲ್ಕು ವರ್ಷಗಳಲ್ಲಿ ತಲುಪಿದೆ. ಅದರಲ್ಲೂ 2022-23 ರಲ್ಲಿ 1,375 ಕೋಟಿ ರೂ. ವಹಿವಾಟು ನಡೆಸಿದ್ದ ಸಂಸ್ಥೆಯು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷಗಳಲ್ಲಿ 2,016 ಕೋಟಿ ರೂ. ತಲುಪಿದೆ.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಸಂಸ್ಥೆಯ ನೂರಾರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
*ಮುಖ್ಯಾಂಶಗಳು*
* 2025-26ರಲ್ಲಿ ನಡೆಸಿರುವ ವಹಿವಾಟು: 2016 ಕೋಟಿ ರೂ.
* 2025-26ರಲ್ಲಿ ನಡೆಸಿರುವ ಉತ್ಪಾದನೆ: 47,000 ಮೆಟ್ರಿಕ್ ಟನ್
* 2025-26ರಲ್ಲಿ ದಾಖಲಿಸಿರುವ ಲಾಭ: 507 ಕೋಟಿ ರೂ.
* ಸರಕಾರಕ್ಕೆ ಹಸ್ತಾಂತರಿಸಲಿರುವ ಲಾಭಾಂಶ: 157 ಕೋಟಿ ರೂ.
* 3 ವರ್ಷಗಳಲ್ಲಿ ಆಗಿರುವ ವಹಿವಾಟಿನ ಹೆಚ್ಚಳ: 641 ಕೋಟಿ ರೂ.
* ಸಂಸ್ಥೆಯ ಒಟ್ಟು ಉತ್ಪನ್ನಗಳು: ಮೂರು ವರ್ಷಗಳಲ್ಲಿ 37ರಿಂದ 94ಕ್ಕೆ ಏರಿಕೆ
For More Updates Join our WhatsApp Group :



