ಹೊಸಪೇಟೆ ಕಲ್ಯಾಣ ಮಂಟಪದಲ್ಲಿ ದರೋಡೆ: ಆಭರಣ ಬ್ಯಾಗ್ ಕದ್ದ ಖದೀಮ ಪರಾರಿ
ವಿಜಯನಗರ: ಜಿಲ್ಲೆಯ ಹೊಸಪೇಟೆ ಪಟ್ಟಣದ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭದ ವೇಳೆ ಕಳ್ಳನೊಬ್ಬ ನುಗ್ಗಿ ವಧುವಿಗೆ ಹಾಕಬೇಕಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳಿದ್ದ ಬ್ಯಾಗ್ ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ. ಮೇ 4ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ನಡೆದ ಈ ಘಟನೆ ತಡವಾಗಿ ಬಹಿರಂಗವಾಗಿದೆ. ಕಳ್ಳತನದಲ್ಲಿ 40 ಗ್ರಾಂ ಚಿನ್ನದ ಸರ, ಅರ್ಧ ಕೆ.ಜಿ ಬೆಳ್ಳಿ, 10 ಸಾವಿರ ರೂಪಾಯಿ ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳು ಕಳೆದುಹೋಗಿವೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳಲ್ಲಿ ಕಳ್ಳ ಬ್ಯಾಗ್ ಸಮೇತ ಪರಾರಿಯಾಗುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದ್ದು, ಪೊಲೀಸರು ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಆದರೆ ದೂರು ದಾಖಲಿಸುವ ವಿಷಯದಲ್ಲೇ ಗೊಂದಲ ಉಂಟಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ದೂರು ನೀಡಲು ಮುಂದಾದರೂ ಪೊಲೀಸರು “ಎಲ್ಲಾ ಐಟಂಗಳನ್ನು ಸಂಪೂರ್ಣವಾಗಿ ತಂದುಕೊಡಿ” ಎಂದು ಹೇಳಿ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನವಾದರೂ ದೂರು ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಹೊಸಕೋಟೆ ನಗರದ ನಂದಶ್ರೀ ಕಲ್ಯಾಣ ಮಂಟಪ ಬಳಿ ಮತ್ತೊಂದು ಕಳ್ಳತನ ಪ್ರಕರಣವೂ ಬೆಳಕಿಗೆ ಬಂದಿದೆ. ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಇಬ್ಬರು ಬೈಕ್ ಸವಾರರು ಕದ್ದೊಯ್ದಿದ್ದು, ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂಬರ್ ಪ್ಲೇಟ್ ಇಲ್ಲದ ಮಾಡಿಫೈಡ್ ಬೈಕ್ ಬಳಸಿ ಕೃತ್ಯ ನಡೆಸಿರುವುದು ಕಂಡುಬಂದಿದೆ. ಸ್ಕೂಟಿಯ ಹ್ಯಾಂಡಲ್ ಲಾಕ್ ಕಾಲಿನಿಂದ ಮುರಿದು ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
For More Updates Join our WhatsApp Group :




