ಬೆಂಗಳೂರು ಸಂಚಾರ ಸುಗಮತೆಗೆ ವೇಗದ ಕಾಮಗಾರಿ: 19 ಕೋಟಿ ವೆಚ್ಚದ ಅಂಡರ್‌ಪಾಸ್ ಯೋಜನೆ
ಬೆಂಗಳೂರು : ಹಳೆ ವಿಮಾನ ನಿಲ್ದಾಣ ರಸ್ತೆಯ ವಿಂಡ್ ಟನಲ್ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಕೆಳಸೇತುವೆ ಕಾಮಗಾರಿಯನ್ನು 3 ತಿಂಗಳೊಳಗೆ ಪೂರ್ಣಗೊಳಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಮಾತನಾಡಿದ ಅವರು, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮೂರು ಪಾಳಿಗಳಲ್ಲಿ ಕೆಲಸ ನಡೆಸಿ ಕಾಮಗಾರಿ ವೇಗವಾಗಿ ಮುಗಿಸಲು ನಿರ್ದೇಶಿಸಿದರು.
19 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕೆಳಸೇತುವೆ 300 ಮೀಟರ್ ಉದ್ದವಾಗಿದ್ದು, ಎರಡೂ ಬದಿಗಳಲ್ಲಿ 7.5 ಮೀಟರ್ ಅಗಲದ ಆರು ಪಥಗಳನ್ನು ಹೊಂದಿದೆ. ಈಗಾಗಲೇ ಶೇ.60ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಮಗಾರಿಯ ಸಮಯದಲ್ಲಿ ಸಂಚಾರ ಅಡಚಣೆ ತಪ್ಪಿಸಲು ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ರಕ್ಷಣಾ ಇಲಾಖೆ, ಇಸ್ರೋ, ಎನ್‌ಎಎಲ್ ಹಾಗೂ ಖಾಸಗಿ ಜಾಗಗಳನ್ನು ಬಳಸಲಾಗುತ್ತಿದೆ.
ಕೆಳಸೇತುವೆ ಕಾಮಗಾರಿ ಮೂರು ಹಂತಗಳಲ್ಲಿ ನಡೆಯಲಿದೆ: ಮೊದಲ ಹಂತದಲ್ಲಿ ಉಪಯುಕ್ತತೆ ಸ್ಥಳಾಂತರ ಹಾಗೂ ತಡೆಗೋಡೆ ನಿರ್ಮಾಣ, ಎರಡನೇ ಹಂತದಲ್ಲಿ ಬಾಕ್ಸ್ ಅಳವಡಿಕೆ, ಮೂರನೇ ಹಂತದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ. ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.
ಈ ಯೋಜನೆ ಪೂರ್ಣಗೊಂಡರೆ ಹಳೆ ವಿಮಾನ ನಿಲ್ದಾಣ ರಸ್ತೆಯ 17 ಕಿ.ಮೀ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
For More Updates Join our WhatsApp Group :




