ಹೊಸಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ.!
ಹೊಸಕೋಟೆ : ಪೊಲೀಸರು ಅಂತರರಾಜ್ಯ ಬೈಕ್ ಕಳ್ಳತನ ಜಾಲವನ್ನು ಭೇದಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ನರಸಿಂಹಮೂರ್ತಿ ಮತ್ತು ಪ್ರಸಾದ್ ಎಂಬ ಆರೋಪಿಗಳು ಸಾರ್ವಜನಿಕರ ದ್ವಿಚಕ್ರ ವಾಹನಗಳನ್ನು ಕದ್ದು ವಿವಿಧ ರಾಜ್ಯಗಳಿಗೆ ಸಾಗಿಸುತ್ತಿದ್ದ ದೊಡ್ಡ ಜಾಲವನ್ನು ನಡೆಸುತ್ತಿದ್ದರೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಬಂಧಿತರಿಂದ ಸುಮಾರು 55 ಲಕ್ಷ ರೂಪಾಯಿ ಮೌಲ್ಯದ 50 ವಿವಿಧ ಕಂಪನಿಗಳ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಕದ್ದ ಬೈಕ್‌ಗಳನ್ನು ಆಂಧ್ರಪ್ರದೇಶ ಗಡಿ ಭಾಗಗಳಲ್ಲಿ ಕೇವಲ 5 ರಿಂದ 10 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿ ಹಣವನ್ನು ಮೋಜು ಮಸ್ತಿಗಾಗಿ ಬಳಸುತ್ತಿದ್ದರೆಂದು ತಿಳಿದುಬಂದಿದೆ.
ಈ ಪ್ರಕರಣವು ಹೊಸಕೋಟೆಯ ಪಾನಿಪುರಿ ವ್ಯಾಪಾರಿಯೊಬ್ಬರ ಬೈಕ್ ಕಳವು ಪ್ರಕರಣದ ತನಿಖೆಯಿಂದ ಬೆಳಕಿಗೆ ಬಂದಿದೆ. ಆ ಪ್ರಕರಣದ ಬೆನ್ನತ್ತಿದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಈ ದೊಡ್ಡ ಜಾಲವನ್ನು ಪತ್ತೆಹಚ್ಚಿದ್ದಾರೆ. ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದರು.ಆರೋಪಿಗಳು ಕೇವಲ ಹೊಸಕೋಟೆ ಮಾತ್ರವಲ್ಲದೆ ಕೋಲಾರ, ಮಾಲೂರು, ಬಂಗಾರಪೇಟೆ, ಕೆ.ಆರ್. ಪುರ ಮತ್ತು ಕಾಡುಗೋಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಳ್ಳತನ ನಡೆಸಿರುವುದು ಪತ್ತೆಯಾಗಿದೆ. ಇವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಪ್ರಸ್ತುತ ಇಬ್ಬರನ್ನೂ ಪೊಲೀಸರು ಬಂಧಿಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ. ಈ ಭರ್ಜರಿ ಕಾರ್ಯಾಚರಣೆಯಿಂದ ಬೈಕ್ ಕಳ್ಳತನ ಜಾಲಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
For More Updates Join our WhatsApp Group :




