ಹಾಸನದ ಅರಣ್ಯ ಭೂಮಿ ಸಂರಕ್ಷಣೆಗೆ ಕ್ರಮ: ನೆಡುತೋಪು ಅಭಿವೃದ್ಧಿಗೆ ಅರಣ್ಯ ಇಲಾಖೆಗೆ ನಿರ್ದೇಶನ
ಬೆಂಗಳೂರು :ಹಾಸನ ನಗರಕ್ಕೆ ಹೊಂದಿಕೊಂಡಂತೆ ಇರುವ ಶಾಂತಿಗ್ರಾಮ ಹೋಬಳಿಯ ಮಡೆನೂರಿನ ಸರ್ವೆ ನಂ. 298ರಲ್ಲಿರುವ 100 ಎಕರೆ ಅರಣ್ಯ ಭೂಮಿಯನ್ನು ಕೂಡಲೇ ವಶಕ್ಕೆ ಪಡೆದು ನೆಡುತೋಪು ಬೆಳೆಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿಂದು ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಿನ್ನೆ ತಾವು ಬೇಲೂರು ಪ್ರವಾಸದ ವೇಳೆ ಹಾಸನದ ಕೃಷಿ ಸಂಶೋಧನಾ ಕೇಂದ್ರ ಮತ್ತು ಜೈವಿಕ ಇಂಧನ ಘಟಕದ ಸಮೀಪ ಇರುವ ಕೋಟ್ಯಂತರ ರೂ. ಬೆಲೆಬಾಳುವ ಭೂಮಿಯ ವೀಕ್ಷಣೆ ಮಾಡಿದ್ದು ಬೆಲೆ ಬಾಳುವ ಈ ಅರಣ್ಯ ಭೂಮಿ ಸಂರಕ್ಷಣೆಗೆ ಆದೇಶ ನೀಡಿದರು.ನೂರು ಎಕರೆ ಭೂಮಿಯನ್ನು 2015-16ರಲ್ಲಿ ಅರಣ್ಯ ಇಲಾಖೆ ಪರವಾಗಿ ಮ್ಯುಟೇಷನ್ ಮಾಡಿ ಪಹಣಿ ಆಗಿರುತ್ತದೆ. ಆದಾಗ್ಯೂ ಇಲ್ಲಿ ಈವರೆಗೆ ಅರಣ್ಯೀಕರಣ ಮಾಡಿ ಉತ್ತಮ ಶ್ವಾಸತಾಣ ನಿರ್ಮಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿ ನಾವು ಅನೇಕ ಪ್ರಕೃತಿ ವಿಕೋಪ ಎದುರಿಸುತ್ತಿದ್ದು, ನಗರ ಪ್ರದೇಶದ ಬಳಿ ಇರುವ ಬೆಲೆಬಾಳುವ ಅರಣ್ಯ ಭೂಮಿಯಲ್ಲಿ ಗಿಡಮರ ಬೆಳೆಸದಿದ್ದರೆ ಮುಂದಿನ ಪೀಳಿಗೆ ಉಸಿರಾಡಲೂ ಕಷ್ಟಪಡಬೇಕಾಗುತ್ತದೆ. ಪ್ರಕೃತಿ ಪರಿಸರ ಉಳಿಸಲು ರಾಜ್ಯದ ಎಲ್ಲ ನಗರ ಮತ್ತು ಪಟ್ಟಣ ಪ್ರದೇಶದ ಸಮೀಪ ಇರುವ ಅರಣ್ಯ ಭೂಮಿ ಒತ್ತುವರಿ ಆಗದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತದಳ ಮತ್ತು ಸಾಮಾಜಿಕ ಅರಣ್ಯ) ಮನೋಜ್ ತ್ರಿಪಾಠಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಡಿಸಿಎಫ್ ರವೀಂದ್ರ ಕುಮಾರ್ ಮತ್ತಿತರರು ಹಾಜರಿದ್ದರು.
For More Updates Join our WhatsApp Group :




