ಸರ್ಕಾರಿ ಕಾಲೇಜುಗಳಲ್ಲಿ ಮೇ 25ರಿಂದ 5 ದಿನ ಸಿಇಟಿ ಸೀಟು ಹಂಚಿಕೆ ಮಂಥನ.!
ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಸಂಬಂಧ ಜಾಗೃತಿ ಮೂಡಿಸುವ 2026ನೇ ಸಾಲಿನ ಸಿಇಟಿ ಸೀಟು ಹಂಚಿಕೆ ಮಂಥನ ಕಾರ್ಯಕ್ರಮವನ್ನು ಇದೇ 25ರಿಂದ 30ರವರೆಗೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪ್ರಕಟಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲ್ಲಿನ ಕಚೇರಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಪ್ರತಿನಿಧಿಗಳಿಗೆ ಶನಿವಾರ ಆಯೋಜಿಸಿದ್ದ ಸೀಟು ಹಂಚಿಕೆ ಮಂಥನ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಪ್ರತಿ ಕಾಲೇಜಿನಿಂದಲೂ ಮೂರು- ನಾಲ್ಕು ಮಂದಿ ಉಪನ್ಯಾಸಕರನ್ನು ಆಹ್ವಾನಿಸಿ, ಸೀಟು ಹಂಚಿಕೆ ಬಗ್ಗೆ ಇಡೀ ದಿನ ತರಬೇತಿ ನೀಡಲಾಯಿತು. 170ಕ್ಕೂ ಹೆಚ್ಚು ಉಪನ್ಯಾಸಕರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷ ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಕೆಲವು ಗೊಂದಲ ಆಗಿತ್ತು. ಆದರೆ ಈ ಬಾರಿ ಮುಂಗಡವಾಗಿ ದಿನಾಂಕ ಮತ್ತು ಸಮಯ ಕಾಯ್ದಿರಿಸಿಕೊಂಡು ಬರುವ ಹಾಗೆ ಕೆಇಎ ವತಿಯಿಂದಲೇ ಆ್ಯಪ್ ಬಿಡುಗಡೆ ಮಾಡಲಿದ್ದು, ಕೊನೆ ಕ್ಷಣದ ಗೊಂದಲಗಳಿಗೆ ತೆರೆ ಬೀಳಲಿದೆ. ಸ್ಲಾಟ್ ಬುಕ್ ಮಾಡಿಕೊಂಡು ಬಂದವರಿಗೇ ಕಾಲೇಜುಗಳಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದೆ. ಆಪ್ಷನ್ಸ್ ದಾಖಲು, ಸೀಟು ಹಂಚಿಕೆ, ಚಾಯ್ಸ್ ದಾಖಲು, ಶುಲ್ಕ ಪಾವತಿ ಹಾಗೂ ಪ್ರವೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಹಂತಗಳ ಮಾಹಿತಿ ಇಲ್ಲದೆ ಅನೇಕರು ತೊಂದರೆಗೆ ಒಳಗಾಗುತ್ತಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
For More Updates Join our WhatsApp Group :




