ತಮಿಳುನಾಡು): ಆಕೆಗೆ 22, ಈತನಿಗೆ 17 ವರ್ಷ. ಇಬ್ಬರ ನಡುವೆ 5 ವರ್ಷಗಳ ಅಂತರವಿದ್ದರೂ, ಬಾಲಕನಿಗೆ ಮಾತ್ರ ಯುವತಿ ಮೇಲೆ ಪ್ರೇಮಾಂಕುರವಾಗಿತ್ತು. ಯುವತಿಯನ್ನು ವರಿಸಲು ಆತ ಇನ್ನಿಲ್ಲದ ಯತ್ನ ಮಾಡಿದ್ದಾನೆ. ಅದ್ಯಾವಾಗ ಆಕೆ ಸಿಗುವುದಿಲ್ಲ ಅಂತ ಗೊತ್ತಾಗಿ, ಪ್ರೀತಿ ವೈರತ್ವವಾಗಿ ಬೆಳೆದು “ಆನ್ಲೈನ್” ಕಿರುಕುಳ ನೀಡಲು ಆರಂಭಿಸಿದ್ದಾನೆ.
ಈ ಬಗ್ಗೆ ಪೋಷಕರು ಬಾಲಕನ ವಿರುದ್ಧ ದೂರು ನೀಡಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಬಳಿಕ ಬುದ್ಧಿವಾದ ಹೇಳಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ, ಆತ ನೀಡಿದ ಕಿರುಕುಳದಿಂದ ಮಾತ್ರ ಯುವತಿ ಬೇಸ್ತು ಬಿದ್ದಿದ್ದಾಳೆ. ಹಲವು ಬಾರಿ ಆಕೆ ಮುಜುಗುರಕ್ಕೆ ಒಳಗಾಗಬೇಕಾಗಿ ಬಂದಿದೆ.
ಯುವತಿಯನ್ನು ಪೀಡಿಸಲು ಆತ ಅನುಸರಿಸಿದ ಹಾದಿ ವಿಚಿತ್ರವಾಗಿದೆ. ಅದೇನೆಂದರೆ, ಯುವತಿಯ ಮನೆ ಪಕ್ಕದ ನಿವಾಸಿಯಾಗಿದ್ದರಿಂದ ತನ್ನ ಮೊಬೈಲ್ನಿಂದ ಆನ್ಲೈನ್ ಮೂಲಕ ಆರ್ಡರ್ಗಳನ್ನು ಮಾಡಿ ಅದನ್ನು ಆಕೆಯ ಮನೆ ವಿಳಾಸಕ್ಕೆ ಕಳುಹಿಸುತ್ತಿದ್ದ. ಡೆಲಿವೆರಿ ನೀಡಲು ಬಂದಾಗ ಅದನ್ನು ತಾನು ಆರ್ಡರ್ ಮಾಡಿಲ್ಲ ಎಂದು ಯುವತಿ ವಾಪಸ್ ಕಳುಹಿಸುತ್ತಿದ್ದಳು.
ಇದೇ ರೀತಿ ‘ಕ್ಯಾಶ್ ಆನ್ ಡೆಲಿವರಿ’ ಮೂಲಕ ಈವರೆಗೂ ನೂರಾರು ಆರ್ಡರ್ಗಳನ್ನು ಯುವತಿಗೆ ಕಳುಹಿಸಿದ್ದಾನೆ. ಅಮೆಜಾನ್, ಫ್ಲಿಪ್ಕಾರ್ಟ್, ಸ್ವಿಗ್ಗಿ ಮುಂತಾದ ಆನ್ಲೈನ್ ಆ್ಯಪ್ಗಳು, ಓಲಾ ಮತ್ತು ಉಬರ್ನಲ್ಲಿ ವಾಹನ ಬುಕ್ ಮಾಡಿ ಮಹಿಳೆಯ ಮನೆಗೆ ಕಳುಹಿಸಿದ್ದಾನೆ. ಯುವತಿ ಇದೆಲ್ಲವನ್ನೂ ಕ್ಯಾನ್ಸಲ್ ಮಾಡಿ ಸುಸ್ತಾಗಿದ್ದಾಳೆ.