ಬೆಂಗಳೂರು: ”ನಾನೇನು ನೂರು ವರ್ಷ ಇಲ್ಲ 1000 ವರ್ಷ ಬದುಕೋಕೆ ಆಗುತ್ತಾ?” ಎಂದು ನಟ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಹೇಳುವ ಮೂಲಕ ತಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಡೆನೂರು ಮನುಗೆ ಕೌಂಟರ್ ಕೊಟ್ಟಿದ್ದಾರೆ. ಅಮೆರಿಕಾಗೆ ತೆರಳಿದ್ದ ಶಿವರಾಜ್ ಕುಮಾರ್ ಅವರು ವೇದಿಕೆ ಮೇಲೆ ಬಹಿರಂಗವಾಗಿ ಹೀಗೆ ಹೇಳಿದ್ದಾರೆ. ಶಿವಣ್ಣ ಮಾತಿಗೆ ಅಲ್ಲಿನ ಅಭಿಮಾನಿಗಳು ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ.

ಧಾರವಾಹಿ, ರಿಯಾಲಿಟಿ ಶೋನಿಂದ ಬಂದ ನಟ ಮಡೆನೂರು ಮನು ಎಂಬಾತ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮಾಡಿದ್ದ. ಇನ್ನೇನು ರಿಲೀಸ್ ಹಂತದಲ್ಲಿದ್ದಾಗ ಅತ್ಯಾಚಾರ, ಬೆದರಿಕೆ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ. ಇದೇ ವೇಳೆ ಸ್ಯಾಂಡಲ್ವುಡ್ ಸ್ಟಾರ್ಗಳ ಬಗ್ಗೆ ಮನು ಮಾತನಾಡಿದ್ದು ಎನ್ನಲಾದ ಆಡಿಯೋ ವೈರಲ್ ಆಗಿತ್ತು. ನಂತರ ಮತ್ತೊಂದು ವಿಡಿಯೋ ಅನ್ನು ಸಂತ್ರಸ್ತೆ ರಿಲೀಸ್ ಮಾಡಿದ್ದರು.
ಆಡಿಯೋವೊಂದರಲ್ಲಿ ಮಡೆನೂರು ಮನು, ನಟರಾದ ಶಿವಣ್ಣ, ಧ್ರುವ ಸರ್ಜಾ ಹಾಗೂ ದರ್ಶನ್ ತೂಗುದೀಪ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಈ ಸ್ಟಾರ್ ನಟರೆಲ್ಲ ಸಾಯೋದ್ರೊಳಗೆ ನಾನು ಸ್ಟಾರ್ ಆಗಿ ಬೆಳೀಬೇಕು ಎಂದು ಹೇಳಿದ್ದ ಆಡಿಯೋ ವೈರಲ್ ಆಗಿತ್ತು. ಇದು ಗಾಂಧಿನಗರದಲ್ಲಿ ಚರ್ಚೆ ಹುಟ್ಟುಹಾಕಿತ್ತು.
ವ್ಯಕ್ತಿಯೊಬ್ಬರು ಬೆಳಿಬೇಕು ಅಂದರೆ ಬೆಳಿಬೇಕು. ಯಾಕೆ ಸುಮ್ಮನೆ ಈ ತರ ಎಲ್ಲ ಮಾಡ್ಕೊಬೇಕು ಎನ್ನುತ್ತಾರೆ. ಮುಂದುವರಿದು ಮನು ‘ಶಿವರಾಜ್ ಕುಮಾರ್ ಇನ್ನೊಂದು 06 ವರ್ಷ ಇರ್ತಾರೆ, ಸತ್ತು ಹೋಗ್ತಾರೆ ಎಂಬುದು ನಂಗೊತ್ತು. ಧ್ರುವ ಸರ್ಜಾ ಇನ್ನೊಂದೆಂಟು ವರ್ಷ ಅಷ್ಟೇ. ನಟ ದರ್ಶನ್ ಸತ್ತೋದ. ದರ್ಶನ್ ಸರ್ ಇನ್ನೊಂದು ಆರು ವರ್ಷ ಅವರದ್ದು ಕ್ರೇಜ್ ಇರುತ್ತೆ, ಸಿನಿಮಾ ಓಡಲ್ಲ. ಈ ಮೂರು ಜನರ ಮಧ್ಯೆ ಕಾಂಪಿಟೇಶನ್ ಕೊಡೋಕೆ ಬಂದಿರೋ ಗಂಡುಗಲಿ ನಾನು’ ಎಂದು ಹೇಳಿಕೊಂಡ ವಿಡಿಯೋ ಸಾಕಷ್ಟು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಅಮೆರಿಕ ವೇದಿಕೆ ಮೇಲೆ ಶಿವಣ್ಣ ಹೇಳಿದ್ದೇನು? ಇದೀಗ ಈ ಹೇಳಿಕೆಗೆ ತಿರುಗೇಟು ನೀಡಿರುವ ನಟ ಶಿವರಾಜ್ ಕುಮಾರ್ ಅವರು, “ನಾನೂ ಮನುಷ್ಯ 100 ವರ್ಷ, ಇಲ್ಲ 1000 ವರ್ಷ ಬದುಕೋಕೆ ಆಗುವುದಿಲ್ಲ. ಎಷ್ಟು ವರ್ಷ ನಾನು ಇರುತ್ತೇನೋ ನಮ್ಮ ನಡುವೆ ಅಷ್ಟೇ ಸಂಬಂಧ ಇರುತ್ತೆ. ಒಂದು ದಿನ ಅಳುತ್ತೇವೆ. ಸ್ವಲ್ಪ ದಿನ ನೆನಪಿಸಿಕೊಳ್ಳುತ್ತೇವೆ. ಹೋದ ಮೇಲೆ ಏನು ಕೊಟ್ಟು ಹೋಗಿರುತ್ತೀವಿ ಎನ್ನುವುದನ್ನು ನೆನಪುಗಳ ಇಟ್ಟುಗೋಬೇಕಷ್ಟೇ. ನೆನಪುಗಳನ್ನು ಕಾಪಾಡಿಕೊಳ್ಳಬೇಕು. ಯಾರೋ ಏನೋ ಹೇಳಿದರೂ ಅಂತಾ ನಾನು ಸಿಕ್ಕಿಹಾಕಿಕೊಳ್ಳಲು ಆಗುವುದಿಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ವೇದಿಕೆ ಮುಂಭಾಗದಲ್ಲಿದ್ದ ಕನ್ನಡ ಮತ್ತು ಶಿವಣ್ಣನ ಅಭಿಮಾನಿಗಳು ನೀವು ನೂರು ವರ್ಷ ಬದುಕಬೇಕು ಶಿವಣ್ಣ ಎಂದು ಜೋರಾಗಿ ಹೇಳಿದ್ದಾರೆ. ಇದಕ್ಕೆ ನಯವಾಗಿಯೇ ಶಿವಣ್ಣ ಉತ್ತರಿಸಿದ್ದಾರೆ. ಈ ಮೂಲಕ ಮಡೆನೂರು ಮನುಗೆ ತಿರುಗೇಟು ನೀಡಿದ್ದಾರೆ. ವ್ಯಕ್ತಿ ಬದುಕಿನಲ್ಲಿ ಹೇಗ ಬದುಕಬೇಕು, ಹೋದ ಮೇಲೆ ಏನು ಶಾಸ್ವತ ಎಂಬುದರ ಪಾಠ ಮಾಡಿದ್ದಾರೆ.