ಬೆಂಗಳೂರು,: ಉದ್ಯಾನ ನಗರಿ ಬೆಂಗಳೂರು ನಗರದ ಜನರು ಈಗಾಗಲೇ ವಿವಿಧ ಬೆಲೆಗಳ ಏರಿಕೆ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿಯೇ ನಗರದಲ್ಲಿ ಆಟೋ ಪ್ರಯಾಣ ದರ ಏರಿಕೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಏಪ್ರಿಲ್ 1 ರಿಂದಲೇ ಅನ್ವಯವಾಗುವಂತೆ ಆಟೋ ಪ್ರಯಾಣ ದರ ಏರಿಕೆ ಮಾಡಿತ್ತು. ಆಟೋ ಚಾಲಕರು ಈ ಕುರಿತು ಬೆಂಗಳೂರು ನಗರ ಜಿಲ್ಲಾಡಳಿತ ಜೊತೆ ಸಭೆಯನ್ನು ಸಹ ನಡೆಸಿದ್ದರು. ಈಗ ಜಿಲ್ಲಾಡಳಿತ ಆಟೋ ಪ್ರಯಾಣ ದರ ಏರಿಕೆ ಕುರಿತು ಅಪ್ಡೇಟ್ ನೀಡಿದೆ.

ಬಿಎಂಟಿಸಿ, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಈಗಾಗಲೇ ನಗರದ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಈಗ ಆಟೋ ಪ್ರಯಾಣ ದರವೂ ಏರಿಕೆಯಾಗಲಿದೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಬೆಂಗಳೂರು ನಗರ ಜಿಲ್ಲಾಡಳಿತದ ತೀರ್ಮಾನದ ಕಾರಣ ಈಗ ಆಟೋ ಚಾಲಕರಿಗೆ ನಿರಾಸೆಯಾಗಿದೆ.
ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರವನ್ನು ಏರಿಕೆ ಮಾಡುವ ಪ್ರಸ್ತಾಪಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ತಡೆ ನೀಡಿದ್ದಾರೆ. 2021ರ ಬಳಿಕ ನಗರದಲ್ಲಿ ಆಟೋ ದರ ಪರಿಷ್ಕರಣೆಯಾಗಿಲ್ಲ. ಆದ್ದರಿಂದ ಆಟೋ ದರ ಹೆಚ್ಚಳ ಮಾಡಬೇಕು ಎಂಬುದು ಚಾಲಕರ ಬೇಡಿಕೆಯಾಗಿದೆ.
ಆಟೋ ಪ್ರಯಾಣ ದರ ಏರಿಕೆ: ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರ ಏರಿಕೆ ಕುರಿತು ಮಾರ್ಚ್ 2ನೇ ವಾರದಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಆಟೋ ಚಾಲಕರ ಒಕ್ಕೂಟ ಸಭೆಯನ್ನು ನಡೆಸಿತ್ತು. ಆಗ ಏಪ್ರಿಲ್ 1 ರಿಂದ ಆಟೋ ದರ ಏರಿಕೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು.
ಆದರೆ ಈಗ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆಟೋ ದರ ಏರಿಕೆ ಇಲ್ಲ ಎಂದು ಹೇಳಿದ್ದಾರೆ. ದರ ಏರಿಕೆ ಕುರಿತು ಸಾರಿಗೆ ಇಲಾಖೆ ಜೊತೆ ಸಭೆ ಮಾಡಿ, ವರದಿ ತಯಾರು ಮಾಡಬೇಕಿದೆ. ಆ ಬಳಿಕ ಮತ್ತೊಮ್ಮೆ ಆಟೋ ಚಾಲಕರ ಜೊತೆ ಸಭೆ ಮಾಡಿ ಪ್ರಯಾಣ ದರ ಏರಿಕೆ ಕುರಿತು ಅಂತಿಮ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಏಪ್ರಿಲ್ 1ರಿಂದ ಆಟೋ ದರ ಹೆಚ್ಚಳವಂತೂ ಆಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಆಟೋ ದರ ಎಷ್ಟು ಏರಿಕೆಯಾಗಲಿದೆ? ಎಂಬುದಕ್ಕೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ. ಆಟೋ ದರ ಏರಿಕೆ ಕುರಿತು ಅಂತಿಮ ಪಟ್ಟಿ ತಯಾರಾಗಲು ಇನ್ನಷ್ಟು ಕಾಲ ಬೇಕು ಎಂದು ಮಾತ್ರ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಕ್ರಮಕ್ಕೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಮತ್ತು 2021ರಲ್ಲಿ ಆಟೋ ದರ ಪರಿಷ್ಕರಣೆಯಾಗಿತ್ತು. ಈಗ ಗ್ಯಾಸ್ ಬೆಲೆ ಏರಿಕೆಯಾಗಿದೆ, ಆಟೋ ಬಿಡಿ ಭಾಗಗಳ ದರಗಳು ಏರಿಕೆಯಾಗಿದೆ, ನಿರ್ವಹಣಾ ವೆಚ್ಚ ಅಧಿಕವಾಗುತ್ತಿದ್ದು ಆಟೋ ಪ್ರಯಾಣ ದರವನ್ನು ಏರಿಕೆ ಮಾಡುವುದು ಅಗತ್ಯವಾಗಿತ್ತು ಎಂದು ಚಾಲಕರು ಹೇಳಿದ್ದಾರೆ.
ನವೆಂಬರ್ 2021ರಲ್ಲಿ ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿತ್ತು. ಆಗ ಮೊದಲ 1.9 ಕಿ. ಮೀ. ಗೆ ಮೂಲ ದರವನ್ನು ರೂ. 30 ಮತ್ತು ನಂತರದ ಪ್ರತಿ ಕಿ. ಮೀ. ಗೆ ರೂ. 15 ಎಂದು ನಿಗದಿಪಡಿಸಲಾಗಿದೆ. ಆದರೆ ಈ ದರವನ್ನು ಹೆಚ್ಚಳ ಮಾಡಬೇಕು ಎಂದು ಆಟೋ ಚಾಲಕರು
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಮಾಡಿದ್ದು, ಆಟೋ ಚಾಲಕರ ಸಂಘಟನೆಗಳ ಜೊತೆ ಜಿಲ್ಲಾಡಳಿತ ಸಭೆಯನ್ನು ಮಾಡಿತ್ತು.