ಬೆಂಗಳೂರು : ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಓಲಾ, ಉಬರ್ ಹಾಗೂ ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಬಿಗ್ ಶಾಕ್ ಕೊಡಲಾಗಿದೆ. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ವಾಹನ ಇಲ್ಲದೆ ಇರುವವರಿಗೆ ಹಾಗೂ ಕಡಿಮೆ ಖರ್ಚಿನಲ್ಲಿ ಹೋಗಬೇಕು ಎನ್ನುವವರು ಓಲಾ, ಉಬರ್ ಹಾಗೂ ರ್ಯಾಪಿಡೋ ಬೈಕ್ಗಳನ್ನು ಅವಲಂಬಿಸುತ್ತಿದ್ದರು. ಆದರೆ, ಇದು ಕಾನೂನು ಬಾಹಿರವಾಗಿತ್ತು. ಇದೀಗ ಈ ಸೇವೆಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಂತೆ ಆಗಿದೆ.

ಹೌದು ಬೆಂಗಳೂರಿನಲ್ಲಿ ಓಲಾ, ಉಬರ್ ಹಾಗೂ ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯು ಮುಂದಿನ ಆರು ವಾರಗಳ ಅವಧಿಯ ವರೆಗೆ ಇರುವುದಿಲ್ಲ. ಮುಂದಿನ ಆರು ವಾರಗಳ ಅವಧಿಗೆ ಓಲಾ, ಉಬರ್ ಹಾಗೂ ರ್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸೇವೆಯನ್ನು ಸ್ಥಗಿತ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ. ಹೈಕೋರ್ಟ್ನ ಆದೇಶವು ನಗರದ ಆಟೋ ಚಾಲಕರಲ್ಲಿ ಸಂತೋಷವನ್ನುಂಟು ಮಾಡಿದೆ.
ಕಳೆದ ಹಲವು ದಿನಗಳಿಂದ ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಬೇಕು ಎಂದು ಆಟೋ ಚಾಲಕರು ಆಗ್ರಹಿಸುತ್ತಲ್ಲೇ ಇದ್ದರು. ಇದೀಗ ಆಟೋ ಚಾಲಕರು ತುಸು ನಿರಾಳವಾಗುವಂತಹ ಸುದ್ದಿ ಬಂದಿದೆ. ಹೌದು ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಪ್ರಾರಂಭವಾದ ಮೇಲೆ ಹಾಗೂ ಖಾಸಗಿ ಕಂಪನಿಗಳ ಟ್ಯಾಕ್ಸಿ ಸೇವೆಯಿಂದ ಆಟೋ ಚಾಲಕರಿಗೆ ಭಾರೀ ನಷ್ಟ ಹಾಗೂ ಸಂಕಷ್ಟ ಎದುರಾಗಿದೆ ಎಂದು ಆಟೋ ಚಾಲಕರು ದೂರಿದ್ದರು. ಈ ಸೇವೆಗಳು ಕಾನೂನು ಬಾಹಿರವಾಗಿದ್ದು ನಿಲ್ಲಿಸಬೇಕು ಎನ್ನುವ ಆಗ್ರಹಗಳು ಸಹ ಕೇಳಿ ಬಂದಿದ್ದವು. ಇನ್ನು ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ನಿರ್ದೇಶನ ಕೊಡಬೇಕು ಎಂದು ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈ. ಲಿ, ರೊಪ್ಪೆನ್ ಟ್ರಾನ್ಸ್ಪೋರ್ಟೇಶನ್ ಸರ್ವೀಸಸ್ ಪ್ರೈ.ಲಿ ಹಾಗೂ ಎಎನ್ಐ ಟೆಕ್ನಾಲಜೀಸ್ ಪ್ರೈ.ಲಿ ಪ್ರಮುಖ ಸಂಸ್ಥೆಗಳು ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದವು. ಈ ಅರ್ಜಿಗಳ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ಬಿ.ಎಂ. ಶ್ಯಾಮಪ್ರಸಾದ್ ಅವರ ಏಕಸದಸ್ಯ ಪೀಠವು ಇದೀಗ ಆರು ವಾರಗಳ ಸೇವೆ ಸ್ಥಗಿತ ಆದೇಶವನ್ನು ಮಾಡಿದೆ.
ಹೊಸ ನಿಯಮ ರೂಪಿಸಲು ಆದೇಶ: ಇನ್ನು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಮುಖ ನಿರ್ದೇಶನವನ್ನೂ ನೀಡಲಾಗಿದೆ. ಬೈಕ್ಟ್ಯಾಕ್ಸ್ ಸಿಟಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮುಂದಿನ ಮೂರು ತಿಂಗಳ ಒಳಗಾಗಿ ಮೋಟಾರು ವಾಹನ ಕಾಯ್ದೆಯ ಅನುಸಾರ ಹೊಸ ನಿಯಮವನ್ನು ರೂಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಕೋರ್ಟ್ನ ಈ ಆದೇಶದಿಂದಾಗಿ ಬೆಂಗಳೂರಿನಲ್ಲಿ ಬೈಕ್ ಸಿಟಿ ಕಾರ್ಯಾಚರಣೆಗೆ ಭಾರೀ ದೊಡ್ಡ ಹಿನ್ನೆಡೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇನ್ನು ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ ಸೇವೆ ಪುನರಾರಂಭವಾಗುವುದು ಅಥವಾ ಆಗದೆ ಇರುವುದು ಎಲ್ಲವೂ ಇದೀಗ ರಾಜ್ಯ ಸರ್ಕಾರದ ಕೈಯಲ್ಲಿಯೇ ಇದೆ. ಸರ್ಕಾರವು ಹೊಸ ನಿಯಮ ರೂಪಿಸಬೇಕು. ಆ ನಂತರ ಈ ಪ್ರಕ್ರಿಯೆ ಪುನರ್ ಪ್ರಾರಂಭವಾಗುವ ಸಾಧ್ಯತೆ ಇದೆ.