ಬೆಂಗಳೂರು : ಪ್ರತಿ ವರ್ಷವು ಪ್ರತಿಯೊಬ್ಬರು ವಿಜೃಂಭನೆಯಿಂದ ಆಚರಿಸುವ ಹಬ್ಬ ದಸರಾ, ಇನ್ನೂ ಈ ಹಬ್ಬದ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯದ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಕಳೆದ ಶುಕ್ರವಾರದಿಂದ ಭಾನುವಾರದವರೆಗೆ 1400 ಟನ್ ತ್ಯಾಜ್ಯ ಏರಿಕೆಯಾಗಿದೆ ಎನ್ನಲಾಗಿದೆ.
ಬಿಬಿಎಂಪಿ ಅಕ್ಟೋಬರ್ 12 ರಂದು ಎಂಟು ವಲಯಗಳಿಂದ 6,306 ಮೆಟ್ರಿಕ್ ಟನ್ (ಎಂಟಿ) ತ್ಯಾಜ್ಯವನ್ನು ಸಂಗ್ರಹಿಸಿದೆ ಎಂದು ತಿಳಿಸಿದೆ. ಸಾಮಾನ್ಯವಾಗಿ ಈ ವಲಯಗಳಲ್ಲಿ ಪ್ರತಿನಿತ್ಯ ಸುಮಾರು 4,900 ಮೆಟ್ರಿಕ್ ಟನ್ ಸಂಗ್ರಹವಾಗುತ್ತಿತ್ತು.
ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ನ ಅಧಿಕಾರಿಗಳು ಮಾತನಾಡಿ, ದಸರಾ ಹಬ್ಬದ ಸಂದರ್ಭದಲ್ಲಿ ಆಯುಧ ಪೂಜೆಗಾಗಿ ಎಲ್ಲಾ ಮಾರುಕಟ್ಟೆಗಳಲ್ಲಿ ಮತ್ತು ರಸ್ತೆಬದಿಗಳಲ್ಲಿ ಬಾಳೆ ಎಲೆಗಳು, ಕುಂಬಳಕಾಯಿ ಹಾಗೂ ಹೂವುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಮಾರಾಟವಾಗದ ವಸ್ತುಗಳನ್ನು ಮಾರಾಟಗಾರರು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ಇದರಿಂದ ತ್ಯಾಜ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಪ್ರತಿದಿನ ಸುಮಾರು 4,900 ಮೆ.ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ, ಈ ಬಾರಿಯ ದಸರಾ ಉತ್ಸವದಲ್ಲಿ ಅಕ್ಟೋಬರ್ 12 ರಂದು 6,306 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ, ಅಕ್ಟೋಬರ್ 13 ರಂದು 5,561 ಮೆಟ್ರಿಕ್ ಟನ್ ಮತ್ತು ಅಕ್ಟೋಬರ್ 14 ರಂದು 5,866 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ ಮಾಡಲಾಗಿದೆ. ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಲ್ಲಿ ಮತ್ತು ಮಿಶ್ರ ತ್ಯಾಜ್ಯವನ್ನು ಲ್ಯಾಂಡ್ಫಿಲ್ನಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಬಿಎಸ್ಡಬ್ಲ್ಯುಎಂಎಲ್ನ ಎಂಜಿನಿಯರ್ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ಕೆ.ಆರ್.ಮಾರುಕಟ್ಟೆ, ಗಾಂಧಿಬಜಾರ್, ದೇವಸಂದ್ರ, ಕೆ.ಆರ್.ಪುರ, ಮಲ್ಲೇಶ್ವರಂ, ಮಡಿವಾಳ ಮತ್ತು ರಸೆಲ್ ಮಾರುಕಟ್ಟೆ, ಪಾಲಿಕೆ ಬಜಾರ್ ಸೇರಿದಂತೆ ಪ್ರಮುಖ 12 ಮಾರುಕಟ್ಟೆಗಳಿಂದ 414 ಮೆ.ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.