ಬೆಂಗಳೂರು: ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಐಶ್ವರ್ಯ ಗೌಡ ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರು ವಂಚನೆ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಕಳೆದ ದಿನ ಹೈಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೆ ಆರೋಪಿಗಳನ್ನು ಮಂಗಳವಾರ ರಾತ್ರಿಯೇ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಆರೋಪಿ ಐಶ್ವರ್ಯ ಗೌಡ ಅವರ ಮೇಲೆ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ನಲ್ಲಿ 14 ಕೆಜಿ 600 ಗ್ರಾನಷ್ಟು ಚಿನ್ನಾಭರಣ ಖರೀದಿಸಿ ವಂಚಿಸಿದ ಆರೋಪವಿದೆ. ಇದರಿಂದಾಗಿ ಆಕೆಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಆಕೆಯ ಪತಿ ಹರೀಶ್ ಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರಿಂದ ಆಕೆಯನ್ನು ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ಜೈಲಿನಲ್ಲಿದ್ದ ಉದ್ಯಮಿ ಐಶ್ವರ್ಯ ಗೌಡ (32) ಹಾಗೂ ಅವರ ಪತಿ ಕೆ.ಎನ್.ಹರೀಶ್ (45) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಆರೋಪಿಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ ಜೆ.ಚೌಟ್ ಹಾಗೂ ಎಸ್.ಸುನಿಲ್ ಕುಮಾರ್, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿದ್ದ ನೋಟೀಸ್ ಅನುಸಾರ ಅರ್ಜಿದಾರರು ಸ್ವಯಿಚ್ಚೆಯಿಂದ ಠಾಣೆಗೆ ತೆರಳಿ ತನಿಖೆಗೆ ಸಹಕರಿಸಿದ್ದಾರೆ. ಆದರೆ, ಪೊಲೀಸರು ಏಕಾಏಕಿ ಅವರನ್ನು ಬಂಧಿಸಿರುವುದು ಕಾನೂನು ಬಾಹಿರ’ ಎಂದು ವಾದಿಸಿದರು. ಜೊತೆಗೆ ಅರ್ಜಿದಾರರನ್ನು ಬಂಧಿಸುವುದಕ್ಕೂ ಮುನ್ನ ಆರೋಪಿಗಳಿಗೆ ಪೊಲೀಸರು ಕಾನೂನುಬದ್ಧವಾಗಿ ನೀಡಬೇಕಾದ ಬಂಧನಕ್ಕೆ ಕಾರಣವಾಗುವ ಅಂಶಗಳನ್ನು ಲಿಖಿತ ರೂಪದಲ್ಲಿ ನೀಡಿಲ್ಲ. ಇದು ಅರ್ಜಿದಾರರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಆಗಿದೆ. ಆದ್ದರಿಂದ ಅವರ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿ ಬಿಡುಗಡೆಗೆ ಆದೇಶಿಸಬೇಕು’ ಎಂದು ಕೋರಿದರು.
ಆದರೆ ಇದಕ್ಕೆ ಗೋಲ್ಡ್ ಅಂಗಡಿ ಮಾಲಕಿ ವನಿತಾ ಪರ ವಾದ ಮಂಡಿಸಿದ ವಕೀಲ ಪಿ. ಅರವಿಂದ ಕಾಮತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಇದೊಂದು ಬಹುಕೋಟಿ ಹಗರಣ. ಪೊಲೀಸರು ಆರೋಪಿಗಳನ್ನು ಬಂಧಿಸುವ ಪೂರ್ವ ಮತ್ತು ನಂತರ ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆಯಗಳನ್ನು ಅನುಸರಿಸಿದ್ದಾರೆ’ ಎಂದು ಪ್ರತಿಯಾಗಿ ವಾದ ಮಂಡಿಸಿದರು. ಇದಕ್ಕೆ ಒಪ್ಪದ ನ್ಯಾಯಪೀಠ ಆರೋಪಿ ಐಶ್ವರ್ಯ ಅವರಿಗೆ ಜಾಮೀನು ನೀಡಿದೆ. ಆರೋಪಿ ಐಶ್ವರ್ಯ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಅಂತ ಹೇಳಿಕೊಂಡು 14 ಕೆಜಿ 600 ಗ್ರಾಮನಷ್ಟು ಚಿನ್ನಾಭರಣ ಖರೀದಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್, ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈ ಬಗ್ಗೆ ಡಿಕೆ ಸುರೇಶ್ ಅವರು ಕಳೆದ ಭಾನುವಾರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಐಶ್ವರ್ಯ ಗೌಡ ಅವರು ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಲ್ಲಿ ಪ್ರಕಟವಾಗುತ್ತಿವೆ. ಹೀಗಾಗಿ ನನ್ನ ಹೆಸರು ಬಳಸಿಕೊಂಡು ವಂಚನೆ ನಡೆಸಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿಕೆ ಸುರೇಶ್ ದೂರು ನೀಡಿದ್ದರು.
ಅಲ್ಲದೆ ಆರೋಪಿ ಐಶ್ವರ್ಯ ಬಿಲ್ಡರ್ ಹಾಗೂ ಚಿನ್ನದ ವ್ಯಾಪಾರಿ ಕಮ್ ಕಾಂಗ್ರೆಸ್ ಮುಖಂಡನಿಗೂ ಸಹ ಕೋಟ್ಯಾಂತರ ರೂಪಾಯಿ ಟೋಪಿ ಹಾಕಿರೋದು ಬೆಳಕಿಗೆ ಬಂದಿದೆ. ಸದ್ಯ ಆ ಉದ್ಯಮಿ ತನ್ನ ಹೆಸರು ಬಹಿರಂಗಪಡಿಸಬೇಡಿ ಎಂದು ತಿಳಿಸಿದ್ದಾರೆ.