ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಆಸ್ತಿ ಮಾಲೀಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಆಸ್ತಿಗಳ ಖಾತಾವನ್ನು ಪಡೆಯಲು ಆನ್ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಖಾತಾವನ್ನು ಪಡೆಯುವ ಪ್ರಕ್ರಿಯೆ ಸರಳಗೊಳಿಸಲು, ಜನರು ಕಛೇರಿಗಳಿಗೆ ಅಲೆದಾಟ ನಡೆಸುವುದನ್ನು ತಪ್ಪಿಸಲು ಈ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ಖಾತಾ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?, ಬೇಕಾಗುವ ದಾಖಲೆಗಳು ಏನು? ಎಂಬ ಮಾಹಿತಿ ಇಲ್ಲಿದೆ.
ಆಸ್ತಿಗಳ ದಾಖಲೀಕರಣ ಡಿಜಿಟಲ್ಗೊಳಿಸಲು, ಕಾಗದ ವ್ಯವಹಾರ ಕಡಿಮೆ ಮಾಡಲು ಬಿಬಿಎಂಪಿ ಹೊಸ ಖಾತಾಗಳನ್ನು ಮಾಡಿಸಲು ಆನ್ಲೈನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೂಚನೆಯಂತೆ ಬೆಂಗಳೂರು ನಗರದ ಜನರಿಗೆ ಆಸ್ತಿ ಖಾತೆಗಳು ಸುಲಭವಾಗಿ ಸಿಗುವಂತೆ ಮಾಡಲು ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಬಿಬಿಎಂಪಿ ಹೊಸದಾಗಿ ನಗರದಲ್ಲಿ 10,000 ಖಾತಾಗಳನ್ನು ನೀಡಲು ಮುಂದಾಗಿದೆ. ಯಾವುದೇ ಖುದ್ದು ಹಾಜರಾತಿ ಪ್ರಕ್ರಿಯೆ ಇಲ್ಲದೇ ವೆಬ್ಸೈಟ್ ಮೂಲಕ ಹೊಸ ಖಾತಾವನ್ನು ಪಡೆಯಲು ಜನರು ಅರ್ಜಿ ಸಲ್ಲಿಸಬಹುದು. ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಕಾಗದ ಪತ್ರ ವ್ಯವಹಾರ ಕಡಿಮೆ ಮಾಡಲು ಈ ವ್ಯವಸ್ಥೆ ತರಲಾಗಿದೆ.
ಒಟ್ಟು 5 ಹಂತಗಳು: ಹೊಸದಾಗಿ ಖಾತಾ ಪಡೆಯಲು ಕೇವಲ 5 ಸರಳ ವಿಧಾನದ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಆಸ್ತಿಯ ಮಾಲೀಕತ್ವವನ್ನು ಪಡೆಯಲು ಖಾತೆ ಬಹಳ ಮುಖ್ಯವಾಗಿದೆ. ಆಸ್ತಿಯ ಪರಭಾರೆ, ತೆರಿಗೆ ಪಾವತಿ, ಸಾಲ ಪಡೆಯುವಾಗ ಖಾತೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ಹಂತ-1: ಆನ್ಲೈನ್ ಮೂಲಕ ಖಾತೆ ಪಡೆಯಲು ಅರ್ಜಿ ಸಲ್ಲಿಕೆ ಮಾಡಲು ಮೊದಲು ಜನರು https://bbmp.karnataka.gov.in/NewKhata/ ವೆಬ್ಸೈಟ್ಗೆ ಭೇಟಿ ನೀಡಬೇಕು. ನಿಮ್ಮ ಮೊಬೈಲ್ ನಂಬರ್, ಒಟಿಪಿ ಮೂಲಕ ಲಾಗಿನ್ ಆಗಬೇಕು.
ಹಂತ- 2: ಆಸ್ತಿಗಳ ಮಾಹಿತಿ ನೀಡಿ. ಮಾರಾಟ/ ನೋಂದಣಿ ಸಂಖ್ಯೆಯನ್ನು ನಮೂದು ಮಾಡಬೇಕು. ಆಗ ಅದು ಸಬ್ ರಿಜಿಸ್ಟರ್ ಕಛೇರಿಯ ದಾಖಲೆಗಳಿಗೆ ಹೊಂದಾಣಿಕೆಯಾಗುತ್ತದೆ.
ಹಂತ-3: ಆಧಾರ್ ನಂಬರ್ ಉಪಯೋಗಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಹಂತ-4: ಜನರು 4ನೇ ಹಂತದಲ್ಲಿ Encumbrance Certificate, ಬೆಸ್ಕಾಂ ಐಡಿ, ಆಸ್ತಿಯ ಇತ್ತೀಚಿನ ಫೋಟೋವನ್ನು ಅಪ್ಲೋಡ್ ಮಾಡಬೇಕು.
ಹಂತ-5: ಆಸ್ತಿಯ ತೆರಿಗೆಯನ್ನು ಕಾಲ ಕಾಲಕ್ಕೆ ಸರಿಯಾಗಿ ಪಾವತಿ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿ. ಎಲ್ಲಾ ಮಾಹಿತಿ ನೀಡಿದ ಬಳಿಕ ಅವುಗಳ ಪರಿಶೀಲನೆಯಾದ ನಂತರ ಆನ್ಲೈನ್ನಲ್ಲಿಯೇ ಹೊಸ ಖಾತೆ ರಚನೆಯಾಗಲಿದೆ. ಒಂದು ವೇಳೆ ನೀವು ಈಗಾಗಲೇ ಕೈ ಬರಹ ಖಾತೆ ಹೊಂದಿದ್ದಲ್ಲಿ ಹೊಸ ಖಾತೆಗಾಗಿ ಅರ್ಜಿ ಸಲ್ಲಿಸಕೂಡದು. ಒಂದು ವೇಳೆ ಈ ರೀತಿ ಮಾಡಿದರೆ ಅದು ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ನಿಮ್ಮ ಆಸ್ತಿಗೆ ಕೈ ಬರಹದ ಖಾತೆಯೂ ಇಲ್ಲದಿದ್ದಲ್ಲಿ ಆನ್ಲೈನ್ ಮೂಲಕ ಖಾತಾ ಪಡೆಯಲು ಅರ್ಜಿ ಸಲ್ಲಿಸಬೇಕು.