ಬೆಂಗಳೂರು: ನಗರದ ಲಾಡ್ಜ್ವೊಂದರಲ್ಲಿ ಮಾಲ್ಡೀವ್ಸ್ ದೇಶದ ಪ್ರಜೆ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿಯನ್ನು ಹಸನ್ ಸುಹೈಲ್ (43) ಎಂದು ಗುರುತಿಸಲಾಗಿದೆ. ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನವೆಂಬರ್ 10ರಂದು ಬೆಂಗಳೂರಿಗೆ ಬಂದಿದ್ದ ಸುಹೈಲ್, ಆರ್.ಟಿ.ನಗರದ ಲಾಡ್ಜ್ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಪ್ರವಾಸಿಗನಾಗಿ ಇವರು ಭಾರತಕ್ಕೆ ಬಂದಿದ್ದರು. ಕೊನೆಯ ಬಾರಿ ನ.12ರಂದು ಸುಹೈಲ್ ರೂಮಿನಲ್ಲಿರುವುದನ್ನು ಸಿಬ್ಬಂದಿ ಕಂಡಿದ್ದಾರೆ. ಅದಾದ ಬಳಿಕ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ರೂಮ್ ಸ್ವಚ್ಛತೆಗೆ ಸಿಬ್ಬಂದಿ ಕದ ತಟ್ಟಿದ್ದರೂ ತೆರೆದಿರಲಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಒಳ ಹೋದಾಗ ರೂಮಿನ ಹಾಲ್ನಲ್ಲಿ ಸುಹೈಲ್ ಮೃತದೇಹವಿತ್ತು.
ನವೆಂಬರ್ 10ರಂದು ಬೆಂಗಳೂರಿಗೆ ಬಂದಿದ್ದ ಸುಹೈಲ್, ನ.11ರಂದು ಭೋಪಾಲ್ಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಹೋಗಿರಲಿಲ್ಲ. ನ.14ರಂದು ಭೋಪಾಲ್ನಿಂದ ಮುಂಬೈಗೆ ವಿಮಾನ ಟಿಕೆಟ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲ್ಡೀವ್ಸ್ನಿಂದ ಭಾರತಕ್ಕೆ ಬರಲು ವೀಸಾ ಅಗತ್ಯವಿಲ್ಲ. ಪಾಸ್ಪೋರ್ಟ್ ಇದ್ದರೆ ಬರಬಹುದು. ಇದೇ ರೀತಿ ಅವರು ಬೆಂಗಳೂರಿಗೆ ಬಂದಿದ್ದರು. ಯಾವ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದರು?, ಭೋಪಾಲ್ ವಿಮಾನ ಟಿಕೆಟ್ ಮಾಡಿ ಪ್ರಯಾಣ ರದ್ದು ಮಾಡಿರುವುದೇಕೆ? ಎಂಬುದರ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.