ಬೆಂಗಳೂರು: ತಲ್ವಾರ್ ಹಿಡಿದು ಡೆಲಿವರಿ ಬಾಯ್ಗಳನ್ನು ಬೆದರಿಸಿ, ರಾಬರಿ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೀವನ್ ಭೀಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಚ್ಎಎಲ್ನ ವಿಭೂತಿಪುರದ ಭರತ್, ವಿಘ್ನೇಶ್ ಹಾಗೂ ಜೋಯಲ್ ಅಭಿಷೇಕ್ ಬಂಧಿತರು.
ವಿವಿಧ ಕಂಪನಿಗಳ ಡೆಲಿವರಿ ಬಾಯ್ಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ತಲ್ವಾರ್ ಹಿಡಿದು ಅಡ್ಡಗಟ್ಟುತ್ತಿದ್ದರು. ಬಳಿಕ ಬೆದರಿಸಿ ಅವರ ಬಳಿಯಿರುವ ಊಟ, ತಿಂಡಿ, ವಸ್ತುಗಳು, ದ್ವಿಚಕ್ರ ವಾಹನವನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು. ಇದೇ ರೀತಿ ಆಗಸ್ಟ್ 4 ಮತ್ತು 21ರಂದು ಹೆಚ್ಎಎಲ್ನ ಕೋನೇನ ಅಗ್ರಹಾರದಲ್ಲಿ ತಲ್ವಾರ್ ಹಿಡಿದು ಡೆಲಿವರಿ ಬಾಯ್ಗಳನ್ನು ದೋಚಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜೀವನ ಭೀಮಾ ನಗರ ಠಾಣೆ ಪೊಲೀಸರು, ಮೊದಲು ಡೆಲಿವರಿ ಬಾಯ್ನನ್ನು ಪತ್ತೆ ಹಚ್ಚಿದ್ದರು. ಆತನಿಂದ ದೂರು ಪಡೆದು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಮಾರತ್ತಹಳ್ಳಿ, ಕೆ.ಆರ್.ಪುರಂ ಸೇರಿದಂತೆ ಹಲವು ಕಡೆಗಳಲ್ಲಿ ತಲ್ವಾರ್ ತೋರಿಸಿ ದೋಚಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಬಂಧಿತರಿಂದ ನಾಲ್ಕು ದ್ವಿಚಕ್ರ ವಾಹನಗಳು, ತಲ್ವಾರ್ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.