ಬೆಂಗಳೂರು: ಅತ್ಯುತ್ತಮ ವಿಮಾನಯಾನ ಸೇವೆ, ಟರ್ಮಿನಲ್ 2 ವಿನ್ಯಾಸ ಸೇರಿದಂತೆ ತನ್ನೇದ ಆದ ಕಾರ್ಯಾಚರಣೆಯ ವಿಧಾನಗಳಿಂದ ಹೆಸರುವಾಸಿಯಾದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಇದೀಗ ಅಧಿಕೃತವಾಗಿ ‘ದೊಡ್ಡ ವಿಮಾನ ನಿಲ್ದಾಣ’ ವರ್ಗಕ್ಕೆ ಸೇರ್ಪಡೆಯಾಗಿದೆ. ಕಳೆದ ವರ್ಷ 2024ರಲ್ಲಿ ಸೇವೆಯಲ್ಲಿ ಅಪ್ರತಿಮ ಸಾಧನೆ ಮಾಡಿ ಮೈಲುಗಲ್ಲು ಸಾಧಿಸಿರುವ KIA ಇದೀಗ ವಿಶ್ವದ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು, ಒಂದೇ ವರ್ಷದಲ್ಲಿ 40.73 ಮಿಲಿಯನ್ ಪ್ರಯಾಣಿಕರಿಗೆ ಸೇವೆ ನೀಡಿರುವ ಬೆಂಗಳೂರು ಏರ್ಪೋರ್ಟ್ ‘ವಿಮಾನ ನಿಲ್ದಾಣ ಮಂಡಳಿ ಅಂತರರಾಷ್ಟ್ರೀಯ’ (ACI) ವರ್ಗಿಕರಣದ ಪ್ರಕಾರ, ‘ದೊಡ್ಡ ವಿಮಾನ ನಿಲ್ದಾಣ’ ವರ್ಗಕ್ಕೆ ಪ್ರವೇಶ ಮಾಡಿದೆ. ಅಂದರೆ ಅತ್ಯಧಿಕ ಪ್ರಯಾಣಿಕರು, ಸರಕು ಸೇವೆಯಲ್ಲಿ ಪ್ರಗತಿ ಸಾಧಿಸುವ ಮೂಲಕ ದೊಡ್ಡ ಏರ್ಪೋರ್ಟ್ ಆಗಿ ಹೊರ ಹೊಮ್ಮಿದೆ ಎಂದು ಮಂಡಳಿ ತಿಳಿಸಿದೆ ಎಂದು ಕೆಇಎ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
ಕೆಇಎ 2024 ರಲ್ಲಿ 40.73 ಮಿಲಿಯನ್ ಪ್ರಯಾಣಿಕರಿಗೆ ಸೇವೆ ನೀಡಿತ್ತು. ಈ ಮೂಲಕ ವಾಷಿರ್ಕವಾಗಿ 21.1 ರಷ್ಟು ಪ್ರಯಾಣಿಕರ ಸೇವೆಯಲ್ಲಿ ಪ್ರಗತಿ ಸಾಧಿಸಿದೆ. ಅಕ್ಟೋಬರ್ 20, 2024 ರಂದು ಒಂದೇ ದಿನದಲ್ಲಿ 126,532 ರ ದಾಖಲೆಯ ಪ್ರಯಾಣಿಕರು ಕೆಇಎ ಮೂಲಕ ಸಂಚರಿಸಿದ್ದಾರೆ.
ಇದೇ 2024ರಲ್ಲಿ 496,227 ಮೆಟ್ರಿಕ್ ಟನ್ ಗಳ (MT) ಸರಕು ಸಾಗಣೆ ಮಾಡುವ ಮೂಲಕ ಕಾರ್ಗೋ ವ್ಯಾಲೂಮ್ನಲ್ಲಿ ವಾರ್ಷಿಕ ಶೇಕಡಾ 17ರಷ್ಟು ಗಮನಾರ್ಹ ಬೆಳವಣಿಗೆ ಸಾಧಿಸಿ ದಾಖಲೆ ಬರೆದಿದೆ. ಏರ್ ಟ್ರಾಫಿಕ್ ಮೂವ್ಮೆಂಟ್ ನಲ್ಲಿ (ATMs) ವಾರ್ಷಿಕ ಶೇಕಡಾ 08.2ರಷ್ಟು ಏರಿಕೆ ಕಂಡಿದೆ.
ಬೆಂಗಳೂರು ಪ್ರಯಾಣ ಮತ್ತು ವ್ಯಾಪಾರಕ್ಕೆ ಪ್ರಮುಖ ಕೇಂದ್ರದ ಸ್ಥಾನ ಎಂಬ ಹೆಗ್ಗಳಿಕೆ ತಂದು ಕೊಟ್ಟಿದೆ. ಈ ಮೇಲಿನ ಎಲ್ಲ ಕಾರಣಗಳಿಂದಾಗಿ ‘ವಿಮಾನ ನಿಲ್ದಾಣ ಮಂಡಳಿ ಅಂತರರಾಷ್ಟ್ರೀಯ’ (ACI) ವರ್ಗಿಕರಣದಲ್ಲಿ ಬೆಂಗಳೂರು ಏರ್ಪೋರ್ಟ್ ದೊಡ್ಡ ವಿಮಾನ ನಿಲ್ದಾಣಗಳ ಸ್ಥಾನ ಪಡೆದುಕೊಂಡಿದೆ.
ಎಸಿಐ ವರ್ಗಿಕರಣಕ್ಕೆ ಬೆಂಗಳೂರು ವಿಮಾನ ನಿಲ್ದಾಣವನ್ನು ಆಯ್ಕೆ ಆಗಿದೆ. ಇದಕ್ಕೆ ಎಲ್ಲಾ ಪ್ರಯಾಣಿಕರು ಮತ್ತು ಪಾಲುದಾರರು ಕಾರಣ, ಅವರಿಗೆಲ್ಲ BLR Airport ಧನ್ಯವಾದ ತಿಳಿಸಿದೆ. 12 ಸರಕು ವಿಮಾನಯಾನ ಸಂಸ್ಥೆಗಳ ಸೇವೆ ಕೆಇಎ ನಲ್ಲಿ 2023ರಲ್ಲಿ 37.2 ದಶಲಕ್ಷವಾಗಿತ್ತು, ಅದು 2024 ರಲ್ಲಿ 40.73 ದಶಲಕ್ಷಕ್ಕೆ ಏರಿಕೆ ಆಗಿದೆ. ಪ್ರಸ್ತುತ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗ ಎರಡರಲ್ಲೂ ಕಾರ್ಯನಿರ್ವಹಿಸುವ 12 ಸರಕು ವಿಮಾನಯಾನ ಸಂಸ್ಥೆಗಳ ಸೇವೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ. ಪ್ರಮುಖ ರಫ್ತು ಮಾರ್ಗಗಳಲ್ಲಿ ಸಿಂಗಾಪುರ (SIN), ಲಂಡನ್ (LHR), ಫ್ರಾಂಕ್ಫರ್ಟ್ (FRA), ಚಿಕಾಗೊ (ORD), ಮತ್ತು ಮಸ್ಕಟ್ (MCT) ಒಳಗೊಂಡಿವೆ. ಅಗ್ರ ಆಮದು ಮಾರ್ಗಗಳಲ್ಲಿ ಶೆನ್ಜೆನ್ (SZX), ಸಿಂಗಾಪುರ (SIN), ಶಾಂಘೈ (PVG) ಹಾಂಗ್ ಕಾಂಗ್ (HKG), ಮತ್ತು ಫ್ರಾಂಕ್ಫರ್ಟ್ (FRA) ಸೇರಿವೆ.
2024 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ಪ್ರಯಾಣಿಕರು ಹಾಗೂ ಸರಕು ಸಾಗಣೆಯಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ವಿಮಾನ ನಿಲ್ದಾಣವು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಆದ್ಯತೆಯ ಹೆಬ್ಬಾಗಿಲಾಗಿ ಬದ್ಧತೆಯನ್ನು ಸಾಬೀತುಪಡಿಸಿದೆ.