ಬೆಳಗಾವಿ: ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗುಡುಗಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇನ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಎಂಇಎಸ್ ಹಾಗೂ ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಪುಂಡಾಟ ಮೆರೆದಿದೆ. ಶಿವಸೇನೆಯ ಶಾಸಕ ಆದಿತ್ಯ ಠಾಕ್ರೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದಿದ್ದು, ಇದು ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆದಿತ್ಯ ಠಾಕ್ರೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶ, ಕನ್ನಡ ರಾಜ್ಯೋತ್ಸವ ಹಾಗೂ ಯಾವುದೇ ವಿಶೇಷ ಕಾರ್ಯಕ್ರಮಗಳು ನಡೆದರೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನೆ ಕಾಲುಕೆರೆದುಕೊಂಡು ಜಗಳಕ್ಕೆ ಬರುತ್ತದೆ. ಈ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಿದ್ದು, ಎಂಇಎಸ್ ತನ್ನ ಪುಂಡಾಟವನ್ನು ಮುಂದುವರಿಸಿದೆ. ಇದರ ಬೆನ್ನಲ್ಲೇ ಶಿವಸೇನೆಯ ಶಾಸಕ ಆದಿತ್ಯ ಠಾಕ್ರೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆದಿತ್ಯ ಠಾಕ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆದಿತ್ಯ ಠಾಕ್ರೆ ಅವರೇ ಬೆಳಗಾವಿ ಕುರಿತು ಪ್ರತಿಕ್ರಿಯಿಸುವ ಮುನ್ನ ದಯವಿಟ್ಟು ಮಹಾಜನ್ ವರದಿಯನ್ನು ಅಧ್ಯಯನ ಮಾಡಿ. ಮಹಾರಾಷ್ಟ್ರದ ಜನರು ನಿಮ್ಮ ಪಕ್ಷಕ್ಕೆ ಸ್ಪಷ್ಟ ಸಂದೇಶವನ್ನು ಕೊಟ್ಟಿದ್ದಾರೆ. ಮೌನವಾಗಿ ಮನೆಯಲ್ಲಿ ಕುಳಿತುಕೊಳ್ಳಿ, ಅಪಕ್ವ ರಾಜಕಾರಣ ಮಾಡಬೇಡಿ. ಭಾಷೆ, ಜಾತಿ ಹಾಗೂ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನವನ್ನು ನಿಲ್ಲಿಸಿ ಎಂದಿದ್ದಾರೆ.
ಆದಿತ್ಯ ಠಾಕ್ರೆ ಹೇಳಿದ್ದೇನು ? ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಆಗ್ರಹಿಸಿದ್ದರು. ಅಲ್ಲದೇ ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದರು. ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿ ಭಾಷಿಕರನ್ನು ತುಳಿಯಲಾಗುತ್ತಿದೆ ಎಂದು ದೂರಿದ್ದರು. ಆದರೆ, ಆದಿತ್ಯ ಠಾಕ್ರೆ ಮಾತಿಗೆ ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಇನ್ನು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಬೆನ್ನಲ್ಲೇ ಎಂಇಎಸ್ ತನ್ನ ಪುಂಡಾಟವನ್ನು ಹೆಚ್ಚಿಸಿದೆ. ಹೀಗಾಗಿ, ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಜ್ಯದ ಚಳಿಗಾಲ ಅಧಿವೇಶನದ ಮೊದಲ ದಿನವೇ ಎಂಇಎಸ್ ಪುಂಡಾಟ ನಡೆಸಿತ್ತು. ಬೆಳಗಾವಿಯ ಬೋಗಾರವೆಸ್ ಸಂಭಾಜಿ ವೃತ್ತದಲ್ಲಿ ಸೇರಿ ವಿವಿಧ ಭಾಗದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕರಾಳ ದಿನಾಚರಣೆಗೆ ಪ್ರಯತ್ನಿಸಲಾಗಿತ್ತು. ಮರಾಠಿ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಕರ್ನಾಟಕ ರಾಜ್ಯದ ಬೆಳಗಾವಿ, ಬೀದರ,ಭಾಲ್ಕಿ ಹಾಗೂ ನಿಪ್ಪಾನಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸುವಂತೆ ಒತ್ತಾಯಿಸಲಾಗುತ್ತಿದೆ. ಬೆಳಗಾವಿಯ ವ್ಯಾಕ್ಸಿನ್ ಡಿಪೊ, ಟಿಳಕವಾಡಿ, ಬೋಗಾರವೆಸ್ ಹಾಗೂ ಗೋವಾವೆಸ್ ಪ್ರದೇಶದಲ್ಲಿ ಈಗಾಗಲೇ ನಗರ ಪೊಲೀಸರು
ನಿಷೇಧಾಜ್ಞೆ ಹೊರಡಿಸಿದ್ದರು. ನಿಷೇಧಾಜ್ಞೆ ನಡುವೆಯೂ ಮರಾಠಿ ಪುಂಡರು ಕಿತಾಪತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೋರಾಟಗಾರರನ್ನು ವಶಕ್ಕೆ ಪಡೆಯಲಾಗಿತ್ತು.