ಬೆಂಗಳೂರು || ಚಿತ್ರಸಂತೆಗೆ ಅದ್ಧೂರಿ ಚಾಲನೆ: ಕಲಾಸಕ್ತರಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಮನವಿ

ಬೆಂಗಳೂರು || ಚಿತ್ರಸಂತೆಗೆ ಅದ್ಧೂರಿ ಚಾಲನೆ: ಕಲಾಸಕ್ತರಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಮನವಿ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಇಂದು ಆಯೋಜಿಸಿರುವ 22ನೇ ಚಿತ್ರಸಂತೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಚಿತ್ರವೊಂದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕನ್ನಡದಲ್ಲೇ ಸಹಿ ಹಾಕುವ ಮೂಲಕ ಚಿತ್ರಸಂತೆಗೆ ಚಾಲನೆ ನೀಡಿದರು. ಅಲ್ಲಿದ್ದ ಕಲಾವಿದರ ಪ್ರತಿಭೆ ಹಾಗೂ ಕೈಚಳಕ ಕಂಡು ಸಿಎಂ ನಿಬ್ಬೆರಗಾದರು.

ಬಳಿಕ ಮಾತನಾಡಿದ ಅವರು, ಸುಮಾರು 22 ರಾಜ್ಯಗಳ ಪ್ರತಿಭಾವಂತ ಕಲಾವಿದರು ಈ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿದ್ದು, ಇದು ಜಗತ್ತಿನಲ್ಲೇ ಅತಿ ದೊಡ್ಡ ಚಿತ್ರಸಂತೆ ಎಂದು ಶ್ಲಾಘಿಸಿದರು. 22 ವರ್ಷಗಳಿಂದ ಕರ್ನಾಟಕ ಚಿತ್ರಕಲಾ ಪರಿಷತ್ತು ನಿರಂತರವಾಗಿ ನಮ್ಮ ನೆಲದ ಸಂಸ್ಕೃತಿ, ಕಲೆ, ಸಂಪ್ರದಾಯಗಳನ್ನು ಜಗತ್ತಿಗೆ ತೋರಿಸುವ ಕೆಲಸಕ್ಕೆ ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರಸಂತೆಗೆ ಬರುವವರು ಇಲ್ಲಿನ ಚಿತ್ರಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಆರ್ಥಿಕವಾಗಿ ಸಬಲರಾಗಲು ಕೈಜೋಡಿಸಬೇಕು. ಇಲ್ಲಿಗೆ ಬರುವವರು ತಮ್ಮ ಮನೆಗಳಿಗೆ ಕನಿಷ್ಠ ಒಂದಾದರೂ ಕಲಾಕೃತಿಯನ್ನು ತೆಗೆದುಕೊಂಡು ಹೋಗಬೇಕು. ಆ ಮೂಲಕ ಮನೆಗೊಂದು ಕಲಾಕೃತಿ ಕಾಣಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಕರ್ನಾಟಕದಲ್ಲಿ ಈ ರೀತಿಯ ದೊಡ್ಡ ಚಿತ್ರಸಂತೆಯು ಹಲವು ಕಲಾವಿದರಿಗೆ ಒಳ್ಳೆಯ ವೇದಿಕೆಯಾಗುತ್ತಿದೆ. ಚಿತ್ರಸಂತೆಯು ಎರಡು ದಶಕಗಳಿಂದಲೂ ಕಲಾವಿದರ ಪ್ರತಿಭೆಗೆ ಉತ್ತಮ ಸ್ಥಳ ಎನಿಸಿಕೊಂಡಿದೆ. ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಿಸಿರುವುದು ಶಾಘನೀಯ ಎಂದರು. ಅನೇಕ ಚಿತ್ರಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸಿ, ಆಸಕ್ತರಿಗೆ ಕೊಳ್ಳುವ ಅವಕಾಶವನ್ನೂ ಚಿತ್ರಸಂತೆ ಒದಗಿಸುತ್ತಿದೆ. ಒಂದು ದಿನಕ್ಕೆ ನಾಲ್ಕು ಲಕ್ಷ ಜನರು ಭೇಟಿ ನೀಡುತ್ತಾರೆ. ಬೆಂಗಳೂರಿಗರಿಗೆ ಇದೊಂದು ಸುವರ್ಣಾವಕಾಶ. ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡಿದ ಮಹಾತ್ಮ ಗಾಂಧಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ, ದತ್ತಮ್ಮ ಮೊದಲಾದವರ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಬ್ಬ ಪುರುಷನಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತಾಗುತ್ತದೆ. ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಕಲಿತಂತಾಗುತ್ತದೆ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದರು. ಚಿತ್ರಸಂತೆಯಲ್ಲಿ ಸಂವಿಧಾನದ ಪೀಠಿಕೆಯನ್ನು ಕೂಡ ಪ್ರದರ್ಶಿಸಲಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರನ್ನೂ ಪ್ರತಿನಿಧಿಸುತ್ತಿದೆ. ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಪ್ರಭಾವಶಾಲಿಯಾಗಿದೆ. ಚಿತ್ರದ ಮೂಲಕ ಜನಜೀವನ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಬಹುದಾಗಿದೆ. ಚಿತ್ರಕಲಾ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು. ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮನವಿ ಮಾಡಿದರು. ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ 22ನೇ ಚಿತ್ರಸಂತೆಯು ಇಂದು ರಾತ್ರಿ 8 ಗಂಟೆಯವರೆಗೆ ಇರಲಿದೆ. ಹೀಗಾಗಿ ಕುಮಾರಕೃಪಾ ರಸ್ತೆಯ ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

Leave a Reply

Your email address will not be published. Required fields are marked *