ಬೆಂಗಳೂರು || ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ: ರಾಜ್ಯ ಬಿಜೆಪಿ ನಾಯಕರಿಗೆ ಜೆ ಪಿ ನಡ್ಡಾ ಕೊಟ್ಟ ಸೂಚನೆ ಏನು?

ಬೆಂಗಳೂರು || ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ: ರಾಜ್ಯ ಬಿಜೆಪಿ ನಾಯಕರಿಗೆ ಜೆ ಪಿ ನಡ್ಡಾ ಕೊಟ್ಟ ಸೂಚನೆ ಏನು?

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ನಲ್ಲಿ ಮಾತ್ರವಲ್ಲದೇ ರಾಜ್ಯ ಬಿಜೆಪಿಯಲ್ಲೂ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಗುಸು ಗುಸು ಕೇಳಿ ಬರುತ್ತಿದೆ. ಬಿಜೆಪಿ ಹೈಕಮಾಂಡ್‌ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ದಿನದಿಂದಲೂ ಯಡಿಯೂರಪ್ಪ ಅವರ ವಿರೋಧಿ ಬಣ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿತ್ತು. ಇದಾದ ಬಳಿಕ ಬಹಿರಂಗವಾಗಿಯೇ ಅಸಮಾಧಾನವನ್ನ ಹೊರಹಾಕಿದ್ದರು.

ಇದೀಗ ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲಂತಾಗಿದ್ದು, ಕಮಲ ಕೋಟೆಯಲ್ಲಿನ ಅಸಮಾಧಾನವನ್ನ ಶಮನಗೊಳಿಸಲು ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಆಗಮಿಸಿದ್ದು, ರಾಜ್ಯ ಬಿಜೆಪಿ ನಾಯಕರ ಜೊತೆಗೆ ಚರ್ಚೆ ನಡೆಸುವ ಮೂಲಕ ರಾಜ್ಯದ ಬಿಜೆಪಿ ನಾಯಕರಿಗೆ ಮಹತ್ವದ ಸೂಚನೆಯನ್ನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಜ್ಯದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಒಂದು ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದರು. ನಾವು ಸಹಜವಾಗಿಯೇ ಮಾತುಕತೆ ನಡೆಸಿದ್ದೇವೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಎಂದು ಹೇಳಿದರು.

ಜೆ.ಪಿ.ನಡ್ಡಾ ಅವರು ಸಂಘಟನೆಯ ಬಗ್ಗೆ ಕೇಳಿದ್ದು, ಎಲ್ಲವನ್ನೂ ಹೇಳಿದ್ದೇವೆ. ವಿರೋಧ ಪಕ್ಷ ನಾಯಕರಾಗಿ ಹೇಗೆ ಕೆಲಸ ಮಾಡ್ತಿದ್ದೀರಿ ಎಂದು ಕೇಳಿದ್ದು, ನಾವು ಮಾಡಿರುವ ಕೆಲಸಗಳ ಬಗ್ಗೆ, ಎಲ್ಲಾ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದ್ದೇವೆ ಎಂದು ತಿಳಿಸಿದರು. ನಾನು, ವಿಪಕ್ಷ ನಾಯಕ ಆರ್.ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ, ಎನ್. ರವಿಕುಮಾರ್, ಲೇಹರ್ ಸಿಂಗ್, ತೇಜಸ್ವಿಸೂರ್ಯ, ಎನ್. ಮುನಿರತ್ನ, ಸಿದ್ದು ಪಾಟೀಲ್ ಸೇರಿದಂತೆ ಅನೇಕ ನಾಯಕರು ಭೇಟಿ ಮಾಡಿದ್ದೇವೆ. ಪ್ರತ್ಯೇಕವಾಗಿ ಕರೆದು ಮಾತನಾಡಿದ್ದಾರೆ; ಪಕ್ಷ ಸಂಘಟನೆ ಹೇಗೆ ನಡೆಯುತ್ತಿದೆ ಎಂಬ ವಿಷಯವನ್ನೂ ಚರ್ಚೆ ಮಾಡಿದ್ದೇವೆ; ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇವೆ ಎಂದು ತಿಳಿಸಿದರು.

ಭಿನ್ನರು ಇಂದು ಜೆ.ಪಿ ನಡ್ಡಾಜೀ ಅವರನ್ನು ಭೇಟಿ ಮಾಡಿಲ್ಲ ಅಂದರೆ ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ ಅಂತ ಅರ್ಥ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಭಿನ್ನಮತ ಇದ್ದರೆ ಅವರು ಜೆ.ಪಿ ನಡ್ಡಾ ಅವರನ್ನು ಭೇಟಿ ಆಗುತ್ತಿದ್ದರು. ಮುಡಾ ಹಗರಣ, ವಾಲ್ಮೀಕಿ ನಿಗಮ, ಸಚಿನ್ ಆತ್ಮಹತ್ಯೆ ಕೇಸ್ ಬಗ್ಗೆಯೂ ಹೋರಾಟ ಮಾಡುತ್ತೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.

ಹೆಣ್ಮಕ್ಕಳಿಗೆ ಉಚಿತ ಪ್ರಯಾಣದರ ನೀಡಿ, ಗಂಡಸರಿಗೆ ಬರೆ ಹಾಕುವ ಸರಕಾರ ಇದೆಂದು ಆಕ್ಷೇಪ ವ್ಯಕ್ತಪಡಿಸಿದರು. ಗ್ಯಾರಂಟಿ ಕಾರಣಗಳಿಂದ ಇವತ್ತು ಜನರು ದುಬಾರಿ ಬೆಲೆಯನ್ನು ತೆರಬೇಕಾಗಿದೆ. ಹಾಲಿನ ದರ ಏರಿಸಿದ್ದೀರಿ. ವಿದ್ಯುತ್ ದರ ಏರಿಕೆ ಮಾಡಿದ್ದೀರಿ. ಸ್ಟಾಂಪ್ ಡ್ಯೂಟಿ, ರಿಜಿಸ್ಟ್ರೇಶನ್ ಶುಲ್ಕ ಮಾತ್ರವಲ್ಲದೆ ವಿವಿಧ ತೆರಿಗೆಗಳನ್ನೂ ಹೆಚ್ಚಿಸಲಾಗಿದೆ ಎಂದು ಖಂಡಿಸಿದರು. ಅಭಿವೃದ್ಧಿ ಒಂದು ಬಿಟ್ಟು ತಲೆ ಬೋಳಿಸುವ ಕೆಲಸ ಮಾಡುವ ಸರಕಾರ ಇದಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರಕಾರದ ಖಜಾನೆ ಪೂರ್ತಿ ಖಾಲಿಯಾಗಿದೆ. ದಿನ ದೂಡಲು ಬರೆ ಹಾಕುವ ಕೆಲಸ ಮಾಡಿದ್ದಾರೆ. ಮೂರನೇ ದಿನಕ್ಕೆ ಮೂರು ನಾಮ ಹಾಕುವ ಕೆಲಸವನ್ನು ಸರಕಾರ ಮಾಡಿದೆ ಎಂದು ಟೀಕಿಸಿದರು.

Leave a Reply

Your email address will not be published. Required fields are marked *