ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸೈಬರ್ ಕ್ರೈಂಗೆ ಯುವ ಸಮೂಹ ಸಹ ಗುರಿಯಾಗುತ್ತಿದೆ. ಹೀಗಾಗಿ ಇದು ಆತಂಕಕ್ಕೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಬೆಂಗಳೂರಿನಲ್ಲಿ ಸೈಬರ್ ಕ್ರೈಮ್ ಹೆಚ್ಚಳಕ್ಕೆ ಕಾರಣವೇನು ಎನ್ನುವುದು ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ಕರ್ನಾಟಕದಾದ್ಯಂತ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಪೊಲೀಸ್ ಧ್ವಜ ದಿನಾಚರಣೆ ಹಾಗೂ ಮುಖ್ಯಮಂತ್ರಿಯವರ ಪದಕ ಪ್ರದಾನ ಸಮಾರಂಭದಲ್ಲಿ ಈ ವಿಷಯ ಪ್ರಸ್ತಾವನೆಯಾಗಿದೆ.

ದೇಶದಲ್ಲಿ ಸೈಬರ್ ಕ್ರೈಂ ಅತಿದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ ವಾರ್ಷಿಕ 20 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರು ಐಟಿ ಸಿಟಿಯಾಗಿರುವುದು ಹಾಗೂ ಇಂಟರ್ನೆಟ್ ಕನೆಕ್ಟಿವಿಟಿ ಹೆಚ್ಚಿರುವುದರಿಂದ ಸೈಬರ್ ಕ್ರೈಮ್ಗಳು ಹೆಚ್ಚಾಗುತ್ತಿರಬಹುದು. ಇದನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಮತ್ತಷ್ಟು ಕಠಿಣವಾಗಿ ಕೆಲಸ ಮಾಡಬೇಕಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಬೆಂಗಳೂರಿನ ಕೋರಮಂಗಲದ ಕೆಎಸ್ಆರ್ಪಿ ಪೆರೇಡ್ ಮೈದಾನದಲ್ಲಿ ಇಂದು ನಡೆದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಮುಖ್ಯಮಂತ್ರಿಯವರ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದು. ಬೆಂಗಳೂರು ನಗರದಲ್ಲಿ ಶಾಂತಿ ನೆಲೆಸಬೇಕು. ಇದರ ಪರಿಣಾಮ ರಾಜ್ಯಕ್ಕೆ ಹೆಚ್ಚು ಬಂಡವಾಳ ಹರಿದು ಬರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿ, ಉದ್ಯೋಗಗಳು ಹೆಚ್ಚಾಗಲಿವೆ ಎಂದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಜನರ ನೆಮ್ಮದಿಯನ್ನ ಕಾಪಾಡಲಾಗಿದೆ. ಕೋಮು ಪ್ರಚೋದನೆ ಮಾಡುವವರು ಅಡಗಿದ್ದಾರೆ. ದಕ್ಷತೆ ಮತ್ತು ಪ್ರಾಮಾಣಿಕೆತೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯು ದೇಶದಲ್ಲಿ ಮೊದಲ ಸ್ಥಾನಕ್ಕೆ ಬರಬೇಕು. ಪೊಲೀಸ್ ಇಲಾಖೆಯನ್ನು ಅಧುನಿಕರಣ, ಬಲವರ್ಧನೆಗೊಳಿಸುವುದು ಹಾಗೂ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ನಮಗೆ ಮುಖ್ಯ. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ. ಸವಾಲುಗಳನ್ನು ಮೆಟ್ಟಿ ನಿಂತು ನಮ್ಮ ಇಲಾಖೆ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಡ್ರಗ್ಸ್ ದುಷ್ಪರಿಣಾಮದ ಕುರಿತು ಯುವ ಸಮೂಹಕ್ಕೆ ಜಾಗೃತಿ ಮೂಡಿಸಬೇಕಿದೆ. ಈವರೆಗೆ ಪೊಲೀಸ್ ಇಲಾಖೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 10 ಲಕ್ಷ ಯುವಕರಿಗೆ ತಿಳುವಳಿಕೆ ಮೂಡಿಸಲಾಗಿದೆ. ಕರ್ನಾಟಕ ಪೊಲೀಸ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ನಕ್ಸಲರನ್ನು ಶರಣಾಗತಿ ಮಾಡಿಸಿ, ನಕ್ಸಲ್ ಮುಕ್ತ ಕರ್ನಾಟಕವಾಗಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಬ್ಯಾಂಕ್ ಪ್ರಕರಣದ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಿದ್ದಾರೆ. ದಾವಣಗೆರೆಯಲ್ಲಿನ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಪತ್ತೆಹಚ್ಚಿದ್ದಾರೆ. ಮುಂದಿನ ದಿನಗಳಲ್ಲಿಯೂ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿ ಮುಖ್ಯಮಂತ್ರಿಯವರ ಪದಕ ಪಡೆಯುವಂತಾಗಲಿ ಎಂದಿದ್ದಾರೆ. ಇಲಾಖೆಯಲ್ಲಿ ನಿಸ್ವಾರ್ಥ ಸೇವೆ, ಹಗಲಿರುಳು ದುಡಿದಿರುವ ಹಾಗೂ ಕರ್ತವ್ಯದ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸ್ಮರಿಸುತ್ತೇನೆ. ಏಪ್ರಿಲ್ 2 ಪೊಲೀಸ್ ಇಲಾಖೆಯಲ್ಲಿ ವಿಶೇಷವಾದ ದಿನ. 1955ರಲ್ಲಿ ಕರ್ನಾಟಕದಲ್ಲಿ ಪೊಲೀಸ್ ಕಾಯ್ದೆ ಆರಂಭವಾಗಿದ್ದರಿಂದ ಏ2ರಂದು ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನದಂದು ಎಲ್ಲ ಅಧಿಕಾರಿ, ಸಿಬ್ಬಂದಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಿದರು.