ಬೆಂಗಳೂರು : ಡಿಸೆಂಬರ್ ತಿಂಗಳಾದರೂ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿಲ್ಲ. ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ವಾರ ವ್ಯಾಪಕ ಮಳೆಯಾಗಿದ್ದರೆ. ಈ ವಾರ ಕೂಡ ವಾಯುಭಾರ ಕುಸಿತದಿಂದ ಮತ್ತೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಇನ್ನೆರೆಡು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದ್ದು, ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಗುರುವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ 64.5 ಮಿಮೀನಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮಧ್ಯಾಹ್ನದ ವೇಳೆಗೆ ನಗರದ ಬಹುತೇಕ ಕಡೆಗಳಲ್ಲಿ ತುಂತುರು ಮಳೆ ಸುರಿಯುತ್ತಲೇ ಇದ್ದು, ಸಂಜೆ ಕೂಡ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.