ಬೆಂಗಳೂರು || ಪತ್ನಿ ಶವದ ಜೊತೆ ಮೂರು ದಿನ ಮನೆಯಲ್ಲಿದ್ದ ಪತಿ..!

ಬೆಂಗಳೂರುಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ಮನೆಯಲ್ಲಿ ಮೂರು ದಿನಗಳ ಕಾಲ ಶವದ ಜೊತೆ ಕಾಲ ಕಳೆದಿದ್ದ ಆರೋಪಿ ಪತಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಸುಮನಾಳನ್ನು ಹತ್ಯೆ ಮಾಡಿದ ಆರೋಪದ ಶಿವಂ ಎಂಬಾತನನ್ನು ಬಂಧಿಸಿ, ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಉತ್ತರಪ್ರದೇಶ ಮೂಲದ ದಂಪತಿ ಆರು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಹೆಣ್ಣೂರಿನ ಥಣಿಸಂದ್ರ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶಿವಂ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಸುಮನಾ ಗೃಹಿಣಿಯಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಆರು ತಿಂಗಳ ಹಿಂದೆ ವಿವಾಹವಾಗಿದ್ದ ದಂಪತಿ ಅನೋನ್ಯವಾಗಿದ್ದರು. ಆದರೆ, ಸೋಮವಾರ ರಾತ್ರಿ ಕೌಟುಂಬಿಕ ವಿಚಾರಕ್ಕಾಗಿ ಇಬ್ಬರು ಜಗಳವಾಡಿದ್ದಾರೆ. ಮದ್ಯದ ನಶೆಯಲ್ಲಿದ್ದ ಶಿವಂ ಪತ್ನಿಯ ಮುಖ ಹಾಗೂ ಮೂಗಿಗೆ ಬಲವಾಗಿ ಕೈಯಿಂದ ಹೊಡೆದಿದ್ದಾನೆ. ಮೂಗಿನಿಂದ ರಕ್ತಸ್ರಾವವಾಗಿದೆ. ಮಾರನೇ ದಿನ ಬೆಳಗ್ಗೆ ಎದ್ದು ನೋಡಿದಾಗ ಸುಮನಾ ಸಾವನ್ನಪ್ಪಿದ್ದಾಳೆ. ಇದನ್ನು ಅರಿಯದ ಆರೋಪಿ, ಪತ್ನಿ ಮಲಗಿಕೊಂಡಿದ್ಧಾಳೆ ಎಂದು ಭಾವಿಸಿ ಎಂದಿನಂತೆ ಕೆಲಸ ಹೊರಟಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ.

ಮಂಗಳವಾರ ಪತ್ನಿ ಸಾವನ್ನಪ್ಪಿರುವ ವಿಚಾರ ಆರೋಪಿಗೆ ಗೊತ್ತಾಗಿದೆ. ಇದರಿಂದ ಆತಂಕಗೊಂಡು ಯಾರಿಗೂ ಹೇಳದೆ ಸುಮ್ಮನಾಗಿದ್ದ. ಎಂದಿನಂತೆ ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಶವದ ಪಕ್ಕದಲ್ಲೇ ಅಡುಗೆ ಮಾಡಿ ಮದ್ಯ ಸೇವಿಸಿದ್ದ. ಶವದಿಂದ ಕೊಳೆತ ವಾಸನೆ ಬರುತ್ತಿದ್ದಂತೆ ನೆರೆಹೊರೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದರು. ಇದನ್ನು ಅರಿಯುತ್ತಿದ್ದಂತೆ, ಆರೋಪಿ ಎಸ್ಕೇಪ್ ಆಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

Leave a Reply

Your email address will not be published. Required fields are marked *