ಬೆಂಗಳೂರು || ‘ಕಳಚಿ ಬಿದ್ದ ಸಿದ್ದರಾಮಯ್ಯನವರ ಮುಖವಾಡ’

ಬೆಂಗಳೂರು || 'ಕಳಚಿ ಬಿದ್ದ ಸಿದ್ದರಾಮಯ್ಯನವರ ಮುಖವಾಡ'

ಬೆಂಗಳೂರು: ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಕಪಟ ಸಮಾಜವಾದಿ ಮುಖವಾಡ ಈ ಅಧಿಕಾರಾವಧಿಯಲ್ಲಿ ಕಳಚಿ ಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೇಳಿದರು. ಹಿಂದೆ ಬಿಜೆಪಿ ಸರಕಾರ ಅತ್ಯುತ್ತಮವಾಗಿ ಕೆಲಸ ಮಾಡಿದ್ದರೂ ಸಹ ಅಂದಿನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ಸಿಗರು ಸಾಕಷ್ಟು ಅಪಪ್ರಚಾರ ಮಾಡಿದರು. ಜನರ ಒಳಿತಿಗಾಗಿ ಈ ಸರಕಾರ ಬಂದಿಲ್ಲ. ಜನರ ಒಳಿತಿಗಾಗಿ ಅಧಿಕಾರ ಪಡೆದಿದ್ದರೆ ಇಂಥ ದರಿದ್ರ ಸರಕಾರವನ್ನು ಜನತೆ ನೋಡಬೇಕಿರಲಿಲ್ಲ ಎಂದು ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆಗೆ ವಿ ವೈ ವಿಜಯೇಂದ್ರ ಅವರು ಮಾತನಾಡಿ, ಹೈಕಮಾಂಡ್ ಅಥವಾ ಗಾಂಧಿ ಕುಟುಂಬಕ್ಕೆ ಕರ್ನಾಟಕ ರಾಜ್ಯವನ್ನು ಅಡ ಇಡಲು ಮತ್ತು ಚುನಾವಣೆ ವೇಳೆ ಎಟಿಎಂ ಆಗಿ ಪರಿವರ್ತಿಸಲು ಕಾಂಗ್ರೆಸ್ಸಿಗೆ ಇಲ್ಲಿ ಸರಕಾರ ಬೇಕಿದೆ ಎಂದು ಟೀಕಿಸಿದರು. ಹಿಂದಿನ ಬಿಜೆಪಿ ಸರಕಾರದ ಮೇಲಿನ ಅಪಪ್ರಚಾರವನ್ನು ನಾವು ಸರಿಯಾಗಿ ನಿಭಾಯಿಸಿಲ್ಲ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದರ ಪರಿಣಾಮವಾಗಿ ವಿಪಕ್ಷದಲ್ಲಿದ್ದೇವೆ. ಅದರ ಬಗ್ಗೆ ನೋವಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ತೀವ್ರ ಬೆಲೆ ಏರಿಕೆ ಮತ್ತು ಸರಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ, ಪರಿಶಿಷ್ಟ ಜಾತಿ, ಜನಾಂಗದ ಅಭ್ಯುದಯಕ್ಕೆ ಮೀಸಲಿಟ್ಟ ಎಸ್ಇಪಿ, ಟಿಎಸ್ಪಿ ಹಣ ದುರ್ಬಳಕೆ- ಇವೆಲ್ಲವನ್ನೂ ರಾಜ್ಯದ ಜನತೆ ಮುಂದೆ ತೆಗೆದುಕೊಂಡು ಹೋಗುತ್ತೇವೆ. ನಿನ್ನೆ ಆರಂಭವಾದ ಅಹೋರಾತ್ರಿ ಧರಣಿಯ ಹೋರಾಟವು ಏ.7ರಿಂದ ಪ್ರಾರಂಭವಾಗುವ ಜನಾಕ್ರೋಶ ಯಾತ್ರೆ ಮೂಲಕ ರಾಜ್ಯದ ಪ್ರತಿ ಜಿಲ್ಲೆಗೆ ತಲುಪಲಿದೆ ಎಂದು ಬಿ ವೈ ವಿಜಯೇಂದ್ರ ಅವರು ತಿಳಿಸಿದರು. ಕಾಂಗ್ರೆಸ್ ಸರಕಾರದ ಹಗಲುದರೋಡೆಯನ್ನು ಜನರಿಗೆ ಮನದಟ್ಟು ಮಾಡುತ್ತೇವೆ. ಜನರ ಹಣ ಲೂಟಿ ಮಾಡಿ, ಜನರಿಗೆ ಬರೆ ಎಳೆದು ಅಧಿಕಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ದೋಖಾಗಳನ್ನು ಜನರ ಮುಂದಿಡಲಿದ್ದೇವೆ ಎಂದು ಹೇಳಿದರು. ಈ ಸರಕಾರದ ನೈಜ ಮುಖವಾಡವನ್ನು ತಿಳಿಸುವ ಕೆಲಸವನ್ನು ಮುಂದಿನ ಒಂದು ತಿಂಗಳು ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದರು.

ಕಾಂಗ್ರೆಸ್ಸಿಗರು ವಕ್ಫ್ ಹೆಸರು ಹೇಳಿ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದವರು; ಇದಕ್ಕೆ ಕರ್ನಾಟಕವೇ ತಾಜಾ ಉದಾಹರಣೆ. ಈ ಹಗರಣದಲ್ಲಿ ಕಾಂಗ್ರೆಸ್ಸಿನ ಅನೇಕ ಮುಖಂಡರ ಹೆಸರು ಕೂಡ ಈ ಹಿಂದೆಯೂ ಕೇಳಿಬಂದಿತ್ತು. ಹಾಗಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ಸಿನವರು ಸಹಜವಾಗಿಯೇ ವಿರೋಧಿಸುತ್ತಾರೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ತುಮಕೂರು || ಶ್ರೀ ಮಠದಲ್ಲಿ ರಾಜಕೀಯ ಸತ್ಯ ಬಿಚ್ಚಿಟ್ಟ ವಿಜಯೇಂದ್ರ : ಯತ್ನಾಳ್ ಉಚ್ಚಟನೆಯ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಬಿವೈವಿ

ಏಕಾಏಕಿ ವಕ್ಫ್ ಹೆಸರು ಹೇಳಿಕೊಂಡು ಸಾವಿರಾರು ವರ್ಷಗಳ ಇತಿಹಾಸ ಇರುವ ಮಠಮಾನ್ಯಗಳ, ದೇವಾಲಯಗಳ ಜಮೀನನ್ನು ವಶಕ್ಕೆ ಪಡೆಯುತ್ತಿದ್ದರು. ನಮ್ಮ ರಾಜ್ಯದಲ್ಲೂ ರೈತರ ಜಮೀನು ಕಬ್ಜಾ ಮಾಡಿಕೊಂಡಿದ್ದಾರೆ. ಅದನ್ನು ಯಾರಿಗೂ ಪ್ರಶ್ನೆ ಮಾಡಲು ಅವಕಾಶ ಇಲ್ಲದಿದ್ದರೆ ಇದ್ಯಾವ ನ್ಯಾಯ? ನಾವು ಯಾವ ದೇಶದಲ್ಲಿದ್ದೇವೆ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ದರಿದ್ರ- ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟ ನಿರಂತರವಾಗಿ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ಜನರ ವಿಶ್ವಾಸ ಮತ್ತು ಆಶೀರ್ವಾದ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಎಲ್ಲವನ್ನೂ ಗಾಳಿಗೆ ತೂರಿ ರೈತರು, ಬಡವರು, ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ಬಗ್ಗೆ ನೋವಿದೆ ಎಂದು ತಿಳಿಸಿದರು. 40 ಶೇಕಡಾ ಸರಕಾರ ಎಂದು ಬಿಜೆಪಿಯನ್ನು ಕರೆದಿದ್ದರು. ಅದಕ್ಕೆ ಪುರಾವೆ ಇಲ್ಲ. ನಾವು ಮುಗ್ಗರಿಸಿದ್ದೂ ಆಗಿದೆ. ಬಿಜೆಪಿ ನಿರಂತರ ಹೋರಾಟ ಮಾಡುವ ಮೂಲಕ ಈ ಸರಕಾರಕ್ಕೆ ತಕ್ಕ ಶಾಸ್ತಿ ಮಾಡಲಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳೇ ದಯವಿಟ್ಟು ನಿಮ್ಮ ಎ.ಸಿ. ರೂಮಿನಿಂದ ಹೊರಕ್ಕೆ ಬನ್ನಿ. ನೀವು ಬೆಂಗಳೂರಿನ ಸಿಎಂ ಅಲ್ಲ. ರಾಯಚೂರು, ಕೊಪ್ಪಳ, ಬೆಳಗಾವಿ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸಚಿವರ ಜೊತೆ ಪ್ರವಾಸ ಮಾಡಿ ಎಂದು ವಿಜಯೇಂದ್ರ ಅವರು ಆಗ್ರಹಿಸಿದರು. ಸಿದ್ದರಾಮಯ್ಯನವರೇ, ಹಿಂದೆ ರಾಜ ಮಹಾರಾಜರು ಮಾರುವೇಷದಲ್ಲಿ ತೆರಳಿ ಪ್ರಜೆಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಬಳಿಕ ಜನರಿಗೆ ಅನುಕೂಲ ಆಗುವ ಯೋಜನೆ ಜಾರಿಗೊಳಿಸುತ್ತಿದ್ದರು. ಮಹಾರಾಜರ ಸ್ಥಾನದಲ್ಲಿರುವ ನೀವು ಕುರ್ಚಿಯ ಅಭದ್ರತೆ ಕಾಡುತ್ತಿದ್ದರೆ ಡಿ.ಕೆ.ಶಿವಕುಮಾರರನ್ನೂ ಜೊತೆಗೇ ಕರೆದುಕೊಂಡು ಹೋಗಿ ಎಂದು ವ್ಯಂಗ್ಯವಾಗಿ ತಿಳಿಸಿದರು. ಬಿತ್ತನೆ ಬೀಜದ ದರ ಹೆಚ್ಚಾಗಿದೆ. ಕಳೆದ 20 ತಿಂಗಳ ಆಡಳಿತದಲ್ಲಿ ಜನರು ಖುಷಿ ಆಗಿದ್ದಾರಾ ಎಂಬ ಬಗ್ಗೆ ಅರಿತುಕೊಳ್ಳಲು ರಾಜ್ಯ ಪ್ರವಾಸ ಮಾಡಿ ಎಂದು ಆಗ್ರಹಿಸಿದರು. ಮಹಿಳೆಯರಿಗೆ 2 ಸಾವಿರ, ಪುಕ್ಕಟೆ ವಿದ್ಯುತ್ ಸೇರಿ ವಿವಿಧ ಯೋಜನೆಗಳ ಕುರಿತು ಭಾಷಣ ಮಾಡುತ್ತಾರೆ. ಆದರೆ, ಅವುಗಳು ಸರಿಯಾಗಿ ಅನುಷ್ಠಾನ ಆಗಿಲ್ಲ ಎಂದು ದೂರಿದರು. ಇದು ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುವ ಸರಕಾರ ಎಂದು ಆರೋಪಿಸಿದರು. ಬಡವರು, ರೈತರು, ಜನಸಾಮಾನ್ಯರು ಇವತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದ ದುಸ್ಥಿತಿ ಬಂದಿದೆ. ಪೆಟ್ರೋಲ್, ಡೀಸೆಲ್, ಹಾಲಿನ ದರ, ಸರಕಾರಿ ಆಸ್ಪತ್ರೆಗಳ ಶುಲ್ಕ ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು. ನಿನ್ನೆಯಷ್ಟೇ ಡೀಸೆಲ್ ಬೆಲೆ 2 ರೂ. ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು. ಇದರಿಂದ ಸರಕುಗಳ ದರವೂ ಹೆಚ್ಚಾಗಲಿದೆ ಎಂದು ತಿಳಿಸಿದರು. ಸರಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಕಾನೂನುಬಾಹಿರವಾಗಿ ಶೇ 4 ಮೀಸಲಾತಿ ನೀಡಿದ್ದಾರೆ. ಮತ್ತೊಂದು ಕಡೆ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್ಇಪಿ, ಟಿಎಸ್ಪಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇನ್ನೊಂದು ಕಡೆ ಬೆಲೆ ಏರಿಕೆ ನಿರಂತರವಾಗಿದೆ. ಇವೆಲ್ಲವನ್ನೂ ವಿರೋಧಿಸಿ ಜನಾಕ್ರೋಶ ಯಾತ್ರೆ ನಡೆಸಲಿದ್ದೇವೆ ಎಂದು ತಿಳಿಸಿದರು. ಭ್ರಷ್ಟ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆಯ ವಿರುದ್ಧ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಹೋರಾಟ ಇದು ಎಂದು ವಿವರಿಸಿದರು. ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬರುವ ಮೊದಲು ಸಾಕಷ್ಟು ಭರವಸೆಗಳನ್ನು ನಾಡಿನ ಜನತೆಗೆ ನೀಡಿತ್ತು. ಜನರ ಕಣ್ಣಿಗೆ ಮಣ್ಣೆರಚಿ ಈ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದರು.

Leave a Reply

Your email address will not be published. Required fields are marked *