ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ, ಕಾಣಿಕೆ ಹುಂಡಿ ಭರ್ತಿ

ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ, ಕಾಣಿಕೆ ಹುಂಡಿ ಭರ್ತಿ

ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರು ಪ್ರತಿದಿನ ಆಗಮಿಸುತ್ತಿದ್ದಾರೆ. ಈ ಬಾರಿ ಒಟ್ಟು 11 ದಿನ ದೇವಾಲಯದ ಬಾಗಿಲು ತೆರೆಯಲಾಗಿರುತ್ತದೆ.

9 ದಿನ ಮಾತ್ರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 20 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇವಿ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ದಿನದ 24 ಗಂಟೆಯೂ ದೇವರ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದಾಗಿ ದೇವಾಲಯದ ಕಾಣಿಕೆ ಹುಂಡಿಯೂ ಭರ್ತಿಯಾಗುತ್ತಿದ್ದು, ಕೋಟ್ಯಾಂತರ ರೂಪಾಯಿ ಸಂಗ್ರಹವಾಗಿದೆ.

ಎಷ್ಟು ಆದಾಯ ಸಂಗ್ರಹ?; ಹಾಸನಾಂಬ ದೇವಿಯ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದಲೂ ಆದಾಯ ಬರುತ್ತಿದೆ. ದೇವಾಲಯಕ್ಕೆ ಭಾನುವಾರ ರಾತ್ರಿ 7 ಗಂಟೆಯವರೆಗೂ 300 ರೂ. ವಿಶೇಷ ದರ್ಶನದ ಟಿಕೆಟ್ಗಳನ್ನು ಪಡೆದು ದೇವಿ ದರ್ಶನ ಮಾಡಿರುವವರ ಸಂಖ್ಯೆ 22217. ಇದರಿಂದ ಸಂಗ್ರಹವಾದ ಮೊತ್ತ 66,35,100 1000 ರೂ.ಗಳು. ಲಾಡು ಪ್ರಸಾದ ಮಾರಾಟವಾಗಿರುವ ಸಂಖ್ಯೆ 30,750 ಅದರಿಂದ ಸಂಗ್ರಹವಾದ ಮೊತ್ತ 18,45,000. ಭಾನುವಾರ ರಾತ್ರಿಯ ತನಕ ಒಟ್ಟು 2,41,93,100 ರೂ. ಆದಾಯ ಸಂಗ್ರಹವಾಗಿದೆ.

ವರ್ಷಕ್ಕೊಮ್ಮೆ ಮಾತ್ರ ಶ್ರೀ ಹಾಸನಾಂಬ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಅಕ್ಟೋಬರ್ 24ರಂದು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳ ಸಮ್ಮುಖದಲ್ಲಿ ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು.

ಹಾಸನ ಜಿಲ್ಲಾಡಳಿತ ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಸೇರಿದಂತೆ ಅನೇಕ ರಾಜಕೀಯ ನಾಯಕರು ಸಹ ದೇವಾಲಯಕ್ಕೆ ಆಗಮಿಸಿ, ದೇವಿಯ ದರ್ಶನವನ್ನು ಪಡೆದಿದ್ದಾರೆ.

ಅಕ್ಟೋಬರ್ 24 ರಂದು ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ನವಂಬರ್ 3ರವರೆಗೂ ಜಾತ್ರಾ ಮಹೋತ್ಸವ ನಡೆಯಲಿದೆ. ನವೆಂಬರ್ 3ರ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಬಾಗಿಲನ್ನು ಶಾಸ್ರೋಕ್ತವಾಗಿ ಮುಚ್ಚಲಾಗುತ್ತದೆ. ಒಟ್ಟು 11 ದಿನದಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದೇವಿಯ ದರ್ಶನಕ್ಕೆ ಅಪಾರ ಭಕ್ತರು ಆಗಮಿಸುತ್ತಿದ್ದು, ದಿನದ 24 ಗಂಟೆಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳಾದ ನೆರಳು, ಜರ್ಮನ್ ಟೆಂಟ್, ಬ್ಯಾರಿಕೇಡ್, ಮ್ಯಾಟ್ ವ್ಯವಸ್ಥೆ ಕಲ್ಪಿಸಲಾಗಿದೆ.

ಹಾಸನಾಂಬ ದೇವಾಲಯದಲ್ಲಿ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ/ ಸಿಬ್ಬಂದಿಗಳೊಂದಿಗೆ ಉತ್ತಮ ಸಂವಹನಕ್ಕಾಗಿ ವಾಕಿ ಟಾಕಿ ವ್ಯವಸ್ಥೆ ಮಾಡಲಾಗಿದೆ. ಜೊನ್ನೆ ಪ್ರಸಾದ ಪೂರೈಕೆಗೆ ಇಸ್ಕಾನ್ ಸಹಯೋಗ ಪಡೆಯಲಾಗಿದೆ. ಲಡ್ಡು ತಯಾರಿಸಲು ಸ್ಥಳೀಯ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿದೆ.

1000 ರೂ. ಟಿಕೆಟ್ ನೇರ ದರ್ಶನಕ್ಕೆ ಅವಕಾಶವಿದ್ದು 2 ಲಾಡು ಉಚಿತವಾಗಿ ನೀಡಲಾಗುತ್ತಿದೆ. 300 ರೂ. ಟಿಕೆಟ್ಗೆ ವಿಶೇಷ ದರ್ಶನಕ್ಕೆ ಅವಕಾಶವಿದ್ದು 1 ಲಡ್ಡು ಉಚಿತವಾಗಿ ನೀಡಲಾಗುತ್ತಿದೆ. 60 ರೂ. ಗೆ 2 ಲಡ್ಡುಗಳುಳ್ಳ ಒಂದು ಪೊಟ್ಟಣದ ಪ್ರಸಾದವನ್ನು ಭಕ್ತರು ಖರೀದಿ ಮಾಡಬಹುದಾಗಿದೆ.

ಜೊನ್ನೆ ಪ್ರಸಾದವನ್ನು 24 ಗಂಟೆಗಳ ಕಾಲ ಉಚಿತವಾಗಿ ನೀಡಲಿದ್ದು, ದೇವಾಲಯದ ಹೊರ ಆವರಣದಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ನೀಡಲಾಗುತ್ತಿದೆ. ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕುಡಿಯುವ ನೀರು, ಬಿಸಿಲನ ಅವಧಿಯಲ್ಲಿ ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *