ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ವನ್ಯಜೀವಿ ಸೂಕ್ಷ್ಮ ವಲಯವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಖಾಸಗಿ ವಾಹನಗಳಿಗೆ ಅನುಮತಿ ನೀಡಿರುವ ಆರೋಪ ಕೇಳಿಬಂದಿದೆ. ಮಲಯಾಳಂ ಸಿನಿಮಾದ ಶೂಟಿಂಗ್ಗಾಗಿ ಅನುಮತಿ ನೀಡಿರುವ ಬಗ್ಗೆ ಸ್ಥಳೀಯರಿಂದಲೂ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇಲ್ಲಿ ಸಾರ್ವಜನಿಕರ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಶೂಟಿಂಗ್ ವಾಹನಗಳಿಗೆ ಅನುಮತಿ ನೀಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಬಿಜೆಪಿ ನಾಯಕರು ಕೂಡ ಇದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಖಂಡನೆ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಮೆಚ್ಚಿಸಲು ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಲು ತುದಿಗಾಲಲ್ಲಿ ನಿಂತಿರುವ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಈಗ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮೇಲೆ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಕೊಟ್ಟು, ಖಾಸಗಿ ವಾಹನಗಳಲ್ಲಿ ನೂರಾರು ಜನ ಬರಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ. ಹೈಕಮಾಂಡ್ ಗುಲಾಮರಾಗಿರುವ ಕರ್ನಾಟಕ ಕಾಂಗ್ರೆಸ್ ನಾಯಕರು ತಮ್ಮ ದೆಹಲಿ ದೊರೆಗಳನ್ನು ಮೆಚ್ಚಿಸಲು ಇಡೀ ಕರ್ನಾಟಕವನ್ನೇ ಕೇರಳಕ್ಕೆ ಮಾರಿಬಿಡಲೂ ಹೇಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ವಾಹನ ಸಂಚಾರದ ನಿಷೇಧದ ತೆರವು ಮಾಡಬೇಕು ಎಂದು ರಾಜ್ಯ ಸರ್ಕಾರ ಚಿಂತಿಸುತ್ತಿರುವ ಸಮಯದಲ್ಲೇ ಅರಣ್ಯ ಸೂಕ್ಷ್ಮ ವಲಯವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಖಾಸಗಿ ವಾಹನಗಳಿಗೆ ಅನುಮತಿ ನೀಡಿರುವುದು ನಿಜಕ್ಕೂ ಖಂಡನೀಯ ಎಂದಿದ್ದಾರೆ. ಪರಿಸರಕ್ಕಾಗಲಿ, ವನ್ಯ ಜೀವಿಗಳಿಗಾಗಲಿ ಯಾವುದೇ ಕಾಳಜಿಯಿಲ್ಲದೆ, ಟಿಂಬರ್ ಮಾಫಿಯಾ ಸೇರಿದಂತೆ ಬೇರೆ ಬೇರೆ ಲಾಬಿಗಳಿಗೆ ಸರ್ಕಾರವು ಶರಣಾಗಿರುವುದು ನಿಜಕ್ಕೂ ಶೋಚನೀಯ. ಅನುಮತಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಅಮಾನತ್ತಿನಲ್ಲಿಟ್ಟು ಸರ್ಕಾರ ಕ್ರಮ ಜರುಗಿಸಬೇಕು, ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಗ್ರಹಿಸಿದ್ದಾರೆ. ಬಂಡೀಪುರ ಕೇರಳದ ಸುಪರ್ದಿಗೆ ಕೊಟ್ಟಿದ್ದಾರೆ: ಸಂಸದ ಯದುವೀರ್ ಈ ವಿಚಾರವಾಗಿ ಮೈಸೂರು-ಕೊಡಗು ಬಿಜೆಪಿ ಸಂಸದ ಯದುವೀರ್ ಒಡೆಯರ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಒತ್ತಾಯಕ್ಕೆ ಮಣಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧಾಜ್ಞೆಯನ್ನು ಹಿಂಪಡೆಯಲು ಹೊರಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.
ವನ್ಯಜೀವಿ ಸೂಕ್ಷ್ಮ ಪ್ರದೇಶದಲ್ಲಿ ಸಾರ್ವಜನಿಕ ವಾಹನಗಳಿಗೆ ನಿಷೇಧವಿದ್ದರೂ ನಿಯಮ ಉಲ್ಲಂಘನೆ ಮಾಡಿ ಅರಣ್ಯ ಇಲಾಖೆ ಶೂಟಿಂಗ್ಗೆ ಅವಕಾಶ ಮಾಡಿ ಕೊಟ್ಟಿದೆ. ಕೇರಳ ರಾಜ್ಯದ ವಾಹನಗಳನ್ನು ಬಿಟ್ಟು ಸಿನಿಮಾ ಶೂಟಿಂಗ್ ಮಾಡಲು ಅರಣ್ಯ ಇಲಾಖೆ ಅನುಮತಿ ಕೊಟ್ಟಿದೆ. ಮೇಲ್ನೋಟಕ್ಕೆ ಇದೆಲ್ಲವೂ ಕರ್ನಾಟಕ ಸರ್ಕಾರ ಬಂಡಿಪುರವನ್ನು ಕೇರಳದ ಸುಪರ್ದಿಗೆ ಕೊಟ್ಟಂತೆ ಕಾಣುತ್ತಿದೆ. ಸಾರ್ವಜನಿಕರು,
ಪರಿಸರ ಪ್ರೇಮಿಗಳು ಬಂಡಿಪುರ ಉಳಿಸಿ ಎಂಬ ಅಭಿಯಾನ ನಡೆಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ನಿಷೇಧಿತ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ಗೆ ಅವಕಾಶ ನೀಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆ, ಅರಣ್ಯೀಕರಣದ ವಿಚಾರಗಳನ್ನೇ ಮರೆತಿರುವ ರಾಜ್ಯ ಸರ್ಕಾರ ದೇಶದ ಪ್ರತಿಷ್ಠಿತ ಅರಣ್ಯ ಪ್ರದೇಶವಾದ ಬಂಡಿಪುರವನ್ನು ಸಂರಕ್ಷಿಸಿ, ಬೆಳೆಸುವಲ್ಲಿ ವಿಫಲವಾಗುತ್ತಿದೆ. ದಿನಕ್ಕೊಂದು ಗೊಂದಲಗಳನ್ನು ಸೃಷ್ಟಿಸುವ ಮೂಲಕ ಜನರ ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ನಮ್ಮ ಭವಿಷ್ಯದ ಸ್ವಚ್ಛ ಉಸಿರನ್ನು ಕಾಪಾಡಲಲು, ಅದನ್ನು ಮುಂದಿನ ಪೀಳಿಗೆಗೆ ನೀಡಲು ಈ ಅರಣ್ಯ ಪ್ರದೇಶಗಳು ಉಳಿಬೇಕು ಹಾಗೂ ಬೆಳಿಯಲು ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಸರದ ಸಮತೋಲನವನ್ನು ಕಾಪಾಡುವ ವನ್ಯಜೀವಿಗಳ ಸಂತತಿ ಅಳಿವಿನಂಚಿನಲ್ಲಿರುವಾಗ, ವನ್ಯಜೀವಿ ಹಾಗೂ ಮಾನವ ಸಂಘರ್ಷಗಳು ಉಂಟಾಗುವುದನ್ನು ತಡೆಯಲು ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿ, ಕಾಂಗ್ರೆಸ್ ಸರ್ಕಾರ ಯಾರನ್ನು ಮೆಚ್ಚಿಸಲು ಹೊರಟಿದೆ? ಇಂತಹ ಸಂರಕ್ಷಿತ ಪ್ರದೇಶಗಳಲ್ಲಿ ಖಾಸಗಿ ವಾಹನದ ಓಡಾಟಕ್ಕೆ, ಚಿತ್ರೀಕರಣದ ಕ್ರಿಯೆಗಳನ್ನು ನಡೆಸಲು ರಾಜ್ಯ ಅರಣ್ಯ ಇಲಾಖೆ ಯಾವ ಆಧಾರದ ಮೇಲೆ ಅನುಮತಿ ನೀಡಿದೆ? ಇದು ಸಚಿವರ ಹಾಗೂ ಕೇರಳ ಕಾಂಗ್ರೆಸ್ ನಾಯಕರ ಒಳ ಒಪ್ಪಂದವೇ? ತಮ್ಮವರಿಗೊಂದು ನ್ಯಾಯ, ಜನತೆಗೊಂದು ನ್ಯಾಯ ಎಂಬಂತೆ ತಾನು ಏನು ಮಾಡಿದರೂ ಸರಿ ಎಂದು ದುರಾಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಗರಂ ಆಗಿದ್ದಾರೆ. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಯ ಹಿತದೃಷ್ಟಿಯಿಂದ ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧಿಸಿದ್ದರು. ಆದರೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ಖುಷಿ ಪಡಿಸಿ ನೆಹರು ಕುಟುಂಬವನ್ನು ಸಂತೃಪ್ತಿಗೊಳಿಸಲು ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಆರೋಪಿಸಿದ್ದಾರೆ.
ಏನಿದು ಆರೋಪ?: ಮಲಯಾಳಂ ಚಿತ್ರತಂಡವು ಸ್ಥಳೀಯ ಪೊಲೀಸರಿಂದ ಸೂಕ್ತ ಅನುಮತಿ ಪಡೆಯದೆ ಶೂಟಿಂಗ್ ಆರಂಭಿಸಿದೆ. ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಖಾಸಗಿ ವಾಹನಗಳ ಮೇಲೆ ಅರಣ್ಯ ಇಲಾಖೆ ನಿಷೇಧ ಹೇರಿದ್ದರೂ, ಮೂರು ಬಸ್ಗಳಲ್ಲಿ ಬಂದ ಶೂಟಿಂಗ್ ತಂಡವು ಬೆಟ್ಟದ ತುದಿಗೆ ತಲುಪಿದೆ. ಭಕ್ತರು ತಮ್ಮ ಖಾಸಗಿ ವಾಹನಗಳನ್ನು ಬೆಟ್ಟದ ಕೆಳಗೆ ನಿಲ್ಲಿಸಿ ಬೆಟ್ಟದ ತುದಿ ತಲುಪಲು ಇಲಾಖೆಯ ವಾಹನಗಳನ್ನು ಬಳಸುವಂತೆ ಇಲಾಖೆ ಸೂಚನೆ ನೀಡಿದೆ. ಆದರೆ ಚಿತ್ರೀಕರಣದ ವಾಹನಗಳು ಬೆಟ್ಟದ ಮೇಲೆ ತೆರಳಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಸಿನಿಮಾ ಶೂಟಿಂಗ್ಗಾಗಿ ಸರ್ಕಾರ ಅನುಮತಿ ನೀಡಿದೆ. ಒಂದು ದಿನದ ಮಟ್ಟಿಗೆ ಮಾತ್ರ ಅವಕಾಶ ಕೊಡಲಾಗಿದ್ದು, ಈ ದೇವಾಸ್ಥಾನದಲ್ಲಿ ಮಾತ್ರ ಚಿತ್ರೀಕರಣಕ್ಕೆ ಅವಕಾಶವಿದೆ. ಹಾಗಾಗಿ ಎರಡು ಬಸ್ಗಳಿಗೆ ಅನುಮತಿ ಕೊಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ ಈ ವಿಚಾರ ವಿವಾದ ಸೃಷ್ಟಿಸಿದೆ.