ಚಿಕ್ಕಬಳ್ಳಾಪುರ || ಪ್ರೀತಿಗೆ ಪೋಷಕರ ವಿರೋಧ: ಠಾಣೆಯಲ್ಲೇ ಮದುವೆ, ತಂದೆ ಸ್ಥಾನದಲ್ಲಿ ನಿಂತು ಆಶೀರ್ವದಿಸಿದ PSI

ಚಿಕ್ಕಬಳ್ಳಾಪುರ || ಪ್ರೀತಿಗೆ ಪೋಷಕರ ವಿರೋಧ: ಠಾಣೆಯಲ್ಲೇ ಮದುವೆ, ತಂದೆ ಸ್ಥಾನದಲ್ಲಿ ನಿಂತು ಆಶೀರ್ವದಿಸಿದ PSI

ಶಿಡ್ಲಘಟ್ಟ: ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲ್ಲಿನ ಪ್ರೇಮಿಗಳಿಬ್ಬರು ಪೊಲೀಸರ ಮೊರೆ ಹೋಗಿ, ಠಾಣೆಯಲ್ಲೇ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಪೊಲೀಸರೇ ಮುಂದೆ ನಿಂತು ವಿವಾಹ ಮಾಡಿಸಿ, ನೂತನ ವಧು, ವರರಿಗೆ ಆಶೀರ್ವಾದ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಈ ಘಟನೆ ನಡೆದಿದೆ.

ಕಳೆದ ಆರು ವರ್ಷಗಳಿಂದ ಶಿಡ್ಲಘಟ್ಟ ತಾಲೂಕಿನ ದೊಡ್ಡದಾಸೇನಹಳ್ಳಿ ಗ್ರಾಮದ ಕಾರ್ತಿಕ್ ಹಾಗೂ ಶಿಡ್ಲಘಟ್ಟ ನಗರದ ಅಂಕಿತಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅಂಕಿತಾಗೆ ಮತ್ತೊಬ್ಬ ಯುವಕನ ಜೊತೆ ಮದುವೆ ಮಾಡಲು ಪೋಷಕರು ತೀರ್ಮಾನಿಸಿದ್ದರು. ಈ ವಿಚಾರವನ್ನು ಪ್ರಿಯಕರ ಕಾರ್ತಿಕ್ಗೆ ಅಂಕಿತಾ ತಿಳಿಸಿದ್ದಳು. ಈ ವೇಳೆ ಕಾರ್ತಿಕ್ ಇನ್ನೂ ಎರಡು ವರ್ಷಗಳ ಕಾಲ ಮದುವೆ ಬೇಡ ಎಂದು ತಿಳಿಸಿದ್ದ. ಇದರಿಂದ ಬೇಸರಗೊಂಡ ಅಂಕಿತಾ ಕಳೆದ ದಿನ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಳು.

ಬಳಿಕ, ಶಿಡ್ಲಘಟ್ಟ ಪೊಲೀಸರು ಯುವಕ-ಯುವತಿಯ ಕಡೆಯ ಪೋಷಕರನ್ನು ಠಾಣೆಗೆ ಕರೆಯಿಸಿ ಮದುವೆಗೆ ಒಪ್ಪಿಸಿದ್ದಾರೆ. ಆದರೆ, ಮದುವೆಗೆ ಯುವತಿಯ ತಾಯಿ, ಅಕ್ಕ-ಬಾವ ಒಪ್ಪಿಗೆ ಸೂಚಿಸಿದ್ದರು. ಆದರೆ ತಂದೆ ಹಾಗೂ ಯುವಕನ ಪೋಷಕರು ಒಪ್ಪದ ಕಾರಣ ಪೊಲೀಸರು ಯುವಕ-ಯುವತಿಯ ಹೇಳಿಕೆಯ ಆಧಾರದ ಮೇಲೆ ಠಾಣೆಯ ಮುಂಭಾಗಲ್ಲಿಯೇ ಅರಿಶಿನ – ಕುಂಕುಮದ ಜೊತೆಗೆ ತಾಳಿಯನ್ನು ಕಟ್ಟಿಸಿದರು. ಪೊಲೀಸ್ ಸಬ್ಇನ್ಸ್ಪೆಕ್ಟರ್ ವೇಣುಗೋಪಾಲ್ ತಂದೆಯ ಸ್ಥಾನದಲ್ಲಿ ನಿಂತು ನವ ವಧು-ವರರನ್ನು ಆಶೀರ್ವದಿಸಿದರು.

Leave a Reply

Your email address will not be published. Required fields are marked *