ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಆಗಿದೆ. ಎಲ್ಲರೂ ರಾಜ್ಯದ ಮುಖ್ಯಮಂತ್ರಿ ಆಗಲು ಮುಂದಾಗಿದ್ದಾರೆ ಎಂದಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಕುರಿತು ಭವಿಷ್ಯ ನುಡಿದಿದ್ದಾರೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಸರ್ಕಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಎದ್ದು ಕಾಣುತ್ತಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಇದೇ ವರ್ಷ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಖಚಿತವಾಗಿ ಸಿಎಂ ಬದಲಾಗಲಿದ್ದಾರೆ. ಸಿಎಂ ಸ್ಥಾನ ಬದಲಾವಣೆ ಖಚಿತ. ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದ್ದು, ಎಲ್ಲ ಶಾಸಕರು ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿಯೇ ಇರುತ್ತಾರೆಂದು ಪಕ್ಷದ ವರಿಷ್ಠರು ಹೇಳಬೇಕು. ಆದರೆ ಭಯದಿಂದ ಸ್ವತಃ ಸಿದ್ದರಾಮಯ್ಯನವರೇ ಅದನ್ನು ಪದೇ ಪದೆ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎನ್ನುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಈ ರೀತಿಯ ಸಂದೇಶ ನೀಡುತ್ತಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲದೆ, ಅಭಿವೃದ್ಧಿ ಶೂನ್ಯವಾಗಿ ಶಾಸಕರು ಬೇಸರಗೊಂಡಿದ್ದಾರೆ. ಜನರಿಗೆ ವಿಶ್ವಾಸ ಹೊರಟುಹೋಗಿದೆ. 2028 ರವರೆಗೆ ಸಿದ್ದರಾಮಯ್ಯನವರೇ ಸಿಎಂ ಎಂದು ಡಿ.ಕೆ.ಶಿವಕುಮಾರ್ ಹೇಳಲಿ. ಅದನ್ನು ಆರನೇ ಗ್ಯಾರಂಟಿ ಎಂದು ಅಂದುಕೊಂಡು ಸುಮ್ಮನಾಗುತ್ತೇವೆ ಎಂದರು.