ಕೊಡಗಿನಲ್ಲಿ ಕಾಫಿ ಕೊಯ್ಲು ಭರದಿಂದ ಸಾಗುತ್ತಿದೆ. ಮೋಡ ಕವಿದ ವಾತಾವರಣದಲ್ಲಿ ಮಳೆ ಸುರಿದು ಬಿಡುತ್ತದೆಯೇನೋ ಎಂಬ ಭಯದಲ್ಲಿ ಕಾಫಿ ಬೆಳೆಗಾರರು ಕಾಫಿಕೊಯ್ಲು ಮಾಡುತ್ತಿದ್ದಾರೆ. ಈಗೇನಾದರೂ ಮಳೆ ಸುರಿಯಿತೆಂದರೆ ಸಂಕಷ್ಟ ತಪ್ಪಿದಲ್ಲ. ಕೊಯ್ಲು ಮಾಡಿರುವ ಕಾಫಿಗೂ ಮುಂದೆ ಬರಲಿರುವ ಫಸಲಿಗೂ ತೊಂದರೆಯಾಗಲಿರುವುದರಿಂದ ಮಳೆ ಬಾರದಿದ್ದರೆ ಸಾಕೆಂದು ದೇವರಿಗೆ ಕೈಮುಗಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಬಾರಿಗೆ ಹೋಲಿಸಿದರೆ ಬಹುತೇಕ ಕಡೆಗಳಲ್ಲಿ ಕಾಫಿ ಇಳುವರಿ ಕುಂಠಿತವಾಗಿದೆ. ಇದಕ್ಕೆ ಕಾರಣವಾಗಿರುವುದು ಕಳೆದ ಕಾಫಿ ಹೂ ಬಿಡುವ ಸಮಯಕ್ಕೆ ಮಳೆ ಬಾರದೆ ಹೋಗಿದ್ದು, ತದನಂತರ ನಿರಂತರ ಮಳೆ ಬಂದು ಇದ್ದ ಫಸಲು ಉದುರುವಂತಾಗಿದ್ದು, ಹೀಗೆ ಕಳೆದ ಬಾರಿಯ ಆಗಿರುವ ಹಲವು ತೊಂದರೆಗಳಿಂದ ಈ ಬಾರಿ ಕಾಫಿ ಫಸಲು ಕಡಿಮೆಯಾಗಿದೆ. ಇದೀಗ ಕೆಲವು ಕಡೆಗಳಲ್ಲಿ ಕಾಫಿ ಹಣ್ಣಾಗಿ ಕೊಯ್ಲುಗೆ ಬಂದಿದ್ದರೆ, ಮತ್ತೆ ಕೆಲವೆಡೆ ಹಣ್ಣಾಗುತ್ತಿದೆ. ಅರೇಬಿಕಾ ಕಾಫಿ ಕೊಯ್ಲು ಬಹುತೇಕ ಕಡೆ ಮುಗಿದಿದ್ದರೆ, ರೊಬಸ್ಟಾ ಕಾಫಿ ಕೊಯ್ಲು ಭರದಿಂದ ಸಾಗುತ್ತಿದೆ.
ಕಾಫಿಗೆ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸವಿದೆ. ಆದರೆ ಈ ಬಾರಿ ಇಳುವರಿ ಕುಂಠಿತವಾಗಿರುವುದರಿಂದ ಹೆಚ್ಚಿನ ಬೆಲೆಯಿದ್ದರೂ ಫಸಲು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲ್ಲಿದ್ದಾಗ ಕಡಲೆಕಾಯಿ ಇಲ್ಲ ಎಂಬಂತಹ ಸ್ಥಿತಿ ಉದ್ಭವಿಸಿದೆ. ಜಿಲ್ಲೆಯ ಹೆಚ್ಚಿನ ಜನರಿಗೆ ಕಾಫಿಯೇ ಜೀವನಾಧಾರವಾಗಿದ್ದು, ಅದರ ಸುತ್ತಲೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಾಗೆಯೇ ಕಾರ್ಮಿಕರಿಗೂ ವರ್ಷಪೂರ್ತಿ ಕೆಲಸ ಕೊಡುವುದರೊಂದಿಗೆ ಜೀವನಕ್ಕೆ ಆಧಾರವಾಗಿದೆ.
ಕಾಫಿ ಬೆಳೆಗಾರರಿಗೆ ಕಾರ್ಮಿಕ ಸಮಸ್ಯೆ ಜಿಲ್ಲೆಯಲ್ಲಿ ಮೊದಲಿಗೆ ಹೋಲಿಸಿದರೆ ಇತ್ತೀಚೆಗಿನ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಎದ್ದು ಕಾಣಿಸುತ್ತಿದೆ. ಹೀಗಾಗಿ ಸ್ಥಳೀಯ ಕಾರ್ಮಿಕರ ಕೊರತೆಯಿಂದ ದೂರದ ರಾಜ್ಯಗಳ ಅದರಲ್ಲೂ ಅಸ್ಸಾಂ ಕಡೆಯ ಕೆಲಸಗಾರರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಸದ್ಯ ಕಾರ್ಮಿಕರಿಗೆ ಕಾಫಿಕೊಯ್ಲುಗೆ ದಿನಗೂಲಿ ಹಾಗೂ ಕೆಜಿಗೆ ಇಂತಿಷ್ಟು ಎಂಬಂತೆ ಎರಡು ವಿಧದಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಫಸಲು ಕಡಿಮೆ ಇರುವ ಕಾರಣ ಹೆಚ್ಚಿನ ಕಾರ್ಮಿಕರು ದಿನಗೂಲಿಯಂತೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಐನೂರರಿಂದ ಆರುನೂರು ರೂಪಾಯಿವರೆಗೆ ಕೂಲಿ ಪಡೆಯುತ್ತಿದ್ದಾರೆ.
ಮೊದಲೆಲ್ಲ ಕಾಫಿಕೊಯ್ಲುಗೆ ಮೈಸೂರು, ಚಾಮರಾಜನಗರ, ತಮಿಳುನಾಡು ಕಡೆಗಳಿಂದ ಕೆಲಸಗಾರರು ಬರುತ್ತಿದ್ದರು. ಸುಮಾರು ಎರಡು ತಿಂಗಳ ಕಾಲ ಇಲ್ಲಿದ್ದು ಕಾಫಿ ಕೊಯ್ಲು ಮುಗಿದ ಬಳಿಕ ಒಂದಷ್ಟು ಹಣ ಸಂಪಾದನೆಯೊಂದಿಗೆ ಹಿಂತಿರುಗುತ್ತಿದ್ದರು. ಆದರೆ ಇತ್ತೀಚೆಗೆ ಆ ಕಡೆಗಳಿಂದ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಅಸ್ಸಾಂ ಕಾರ್ಮಿಕರನ್ನು ಅವಲಂಭಿಸುವುದು ಅನಿವಾರ್ಯವಾಗಿದೆ. ಇವರು ಸ್ಥಳೀಯ ಕಾರ್ಮಿಕರಿಗಿಂತ ಕಡಿಮೆ ಕೂಲಿಗೆ ಕೆಲಸ ಮಾಡುತ್ತಾರೆಯಾದರೂ ಇವರ ಮೇಲೆ ನಿಗಾವಹಿಸಬೇಕಾಗುತ್ತದೆ.
ಕಾಫಿ ಕೊಯ್ಲು ಮಾಡಿ ಒಣಗಿಸುವುದೇ ಸವಾಲ್ ಅಸ್ಸಾಂ ಕಾರ್ಮಿಕರು ಜಿಲ್ಲೆಗೆ ಬಂದ ಬಳಿಕ ಕಾಫಿತೋಟದಲ್ಲಿ ಕಾರ್ಮಿಕರ ಕೊರತೆ ನೀಗುತ್ತದೆಯಾದರೂ ಅಪರಾಧ ಚಟುವಟಿಕೆ ಹೆಚ್ಚಾಗುತ್ತಿದೆ. ಕೊಲೆ, ಕಳ್ಳತನ ಹೆಚ್ಚಾಗುತ್ತಿದೆ. ಹೀಗಾಗಿ ಪೊಲೀಸರು ಕಠಿಣ ನಿಯಮಗಳನ್ನು ಜಾರಿ ಮಾಡಿದ್ದಾರೆ. ತೋಟಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಸಂಪೂರ್ಣ ದಾಖಲೆ ಮತ್ತು ಭಾವಚಿತ್ರಗಳನ್ನು ಸಂಗ್ರಹಿಟ್ಟುಕೊಳ್ಳುವುದಲ್ಲದೆ, ಮಾಹಿತಿಗಳನ್ನು ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಯಮ ಪಾಲಿಸದೆ ಹೋದರೆ ಅಪರಾಧ ಚಟುವಟಿಕೆ ನಡೆದಾಗ ಅದರಲ್ಲಿ ಆಶ್ರಯ ನೀಡಿದ ಬೆಳೆಗಾರರನ್ನು ಹೊಣೆ ಮಾಡಲಾಗುತ್ತದೆ. ಕಾಫಿಗೆ ಬೆಲೆ ಏರಿಕೆಯಾಗಿರುವ ಕಾರಣ ಕಳ್ಳತನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಕಾಫಿಯನ್ನು ಕಾಪಾಡಿಕೊಳ್ಳುವುದು ಕೂಡ ಬೆಳೆಗಾರರಿಗೆ ಸವಾಲ್ ಆಗಿ ಪರಿಣಮಿಸಿದೆ. ಈಗಿನ ಮೋಡಕವಿದ ವಾತಾವರಣದಲ್ಲಿ ಕಾಫಿಯನ್ನು ಕೊಯ್ಲು ಮಾಡಿದ ಅದನ್ನು ಒಣಗಿಸಿ ಚೀಲಕ್ಕೆ ತುಂಬಿಸಿ ಗೋಡೌನ್ ಗಳಲ್ಲಿ ದಾಸ್ತಾನು ಮಾಡುವುದು ಸುಲಭವಾಗಿ ಉಳಿದಿಲ್ಲ. ಜತೆಗೆ ಆತಂಕವೂ ಇಲ್ಲದಿಲ್ಲ. ಆದರೆ ಕಾಫಿಯನ್ನು ತೋಟದಿಂದ ಕೊಯ್ಲು ಮಾಡಿ ಒಣಗಿಸಿ ದಾಸ್ತಾನು ಮಾಡುವ ತನಕ ಮಳೆ ಬಾರದಿದ್ದರೆ ಸಾಕೆಂದು ಬೆಳೆಗಾರರು ಕಾಯುತ್ತಿದ್ದಾರೆ. ಒಟ್ಟಾರೆ ಅಕಾಲಿಕ ಮಳೆ ಕಾಫಿ ಬೆಳೆಗಾರರಲ್ಲಿ ಭೀತಿ ಸೃಷ್ಟಿಸಿರುವುದಂತು ನಿಜ.