ಕುಣಿಗಲ್ : ಪರವಾನಗಿ ಭೂಮಾಪಕರ ಮೇಲೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ತಾಲೂಕು ಪರವಾನಗಿ ಭೂಮಾಪಕ ಸಂಘದ ಪದಾಧಿಕಾರಿಗಳು ಹಾಗೂ ಭೂಮಾಪಕರು ಕೆಲಸ ಸ್ಥಗಿತಗೊಳಿಸಿ ಬುಧವಾರ ತಾಲೂಕು ಆಡಳಿತ ಸೌಧ ಎದುರು ಪ್ರತಿಭಟನೆ ನಡೆಸಿದರು.
ಕರ್ತವ್ಯನಿರತ ಭೂಮಾಪಕರ ಮೇಲೆ ಹಾಕಿಸಿರುವ ಸುಳ್ಳು ಪ್ರಕರಣವನ್ನು ರದ್ದು ಪಡಿಸುವಂತೆ ಮತ್ತು ಭೂಮಾಪಕರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಸಂಘದ ಅಧ್ಯಕ್ಷ ಜಯರಾಜು(ಅರಸು) ಅವರ ನೇತೃತ್ವದಲ್ಲಿ ಮೋಜಿಣಿ, ಆಕಾರ್ ಬಂದ್, ಗಣಕಿ ಕಾರ್ಯ, ಪೋಡಿ ಮುಕ್ತ, ಹಿಸ್ಸಾ ಅಪ್ಲ್ಲೋಡ್ ಸ್ವಾಮಿತ್ವ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಧರಣಿ ನಡೆಸಿದರು.
ಸಂಘದ ಅಧ್ಯಕ್ಷ ಜಯರಾಜು(ಅರಸು) ಮಾತನಾಡಿ ತಾಲೂಕು ಕಸಬಾ ಹೋಬಳಿ ಮಲ್ಲಾಘಟ್ಟ ಗ್ರಾಮದ ರಿ ಸರ್ವೆ ನಂ 35/11ರ ಅರ್ಜಿದಾರರಾದ ಬೋರೇಗೌಡ ಅವರು ಅ.೦6ರಂದು ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅದು ಮೋಜಿಣಿ ತಂತ್ರಾOಶದ ಮೂಲಕ ಸದರಿ ಪ್ರಕರಣವು ಪರವಾನಗಿ ಭೂಮಾಪಕ ಗಜೇಂದ್ರ ಅವರಿಗೆ ಹಂಚಿಕೆಯಾಗಿತ್ತು. ಭೂ ಮಾಪಕರು ಮುಂಚಿತವಾಗಿ ನೋಟಿಸ್ ಮೂಲಕ ಅರ್ಜಿದಾರರಿಗೆ ಮತ್ತು ಬಾಜುದಾರರಿಗೆ ತಿಳಿವಳಿಕೆ ನೀಡಿ, ಅ.೦7 ರಂದು ಜಮೀನಿನಲ್ಲಿ ಅಳತೆ ಕೆಲಸ ನಿರ್ವಹಿಸುತ್ತಿದ್ದರು.
ಆಗ ಅರ್ಜಿದಾರರು ಮತ್ತು ಬಾಜುದಾರರ ನಡುವೆ ಗಲಾಟೆಯಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಕೋರಿಕೆಯಂತೆ ಭೂಮಾಪಕರು ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಅಳತೆ ಮಾಡಲು ಅಳತೆಯನ್ನು ಮುಂದೂಡಿ ಮಹಜರ್ ಮಾಡಿ ಹಿಂದಿರುಗಿದ್ದರು. ಆದರೆ ಮಮತಾ ಎಂಬುವರು ಅರ್ಜಿದಾರ ಬೋರೇಗೌಡ, ಆತನ ಅಳಿಯ ಮಂಜುನಾಥ, ಬೋರೇಗೌಡ ಅವರ ಮಗ ಭರತ್ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಯಾವುದೇ ತಪ್ಪು ಮಾಡದ ಪರವಾನಗಿ ಭೂ ಮಾಪಕ ಗಜೇಂದ್ರ, ಬಿ.ಸಿ.ವಿನಯ್ಕುಮಾರ್ ಅವರ ಹೆಸರನ್ನು ಪ್ರಕರಣದಲ್ಲಿ ದಾಖಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಗಂಗಾಧರಯ್ಯ ಮಾತನಾಡಿ, ಹೀಗಾದರೆ ನಮಗೆ ರಕ್ಷಣೆ ನೀಡುವವರು ಯಾರು? ಕೂಡಲೆ ಭೂ ಮಾಪಕರ ಹೆಸರುಗಳನ್ನು ಪ್ರಕರಣದಿಂದ ಕೈ ಬಿಡಿಸಬೇಕು. ಜತೆಗೆ ಮುಂದೆ ಇಂತಹ ಘಟನೆ ಮರುಕಳಿಸದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕರ್ತವ್ಯ ನಿರತ ಭೂಮಾಪಕರಿಗೆ ರಕ್ಷಣೆ ನೀಡಬೇಕೆಂದು ಅವರು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಡಿಎಫ್ಆರ್ ತೋಂಟದಾರಾಧ್ಯ, ಸಂಬOಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಯಿತು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಿದ್ದಗಂಗಯ್ಯ, ಖಜಾಂಚಿ ಶ್ರೀನಿವಾಸ್ ಭಾಗವಹಿಸಿದ್ದರು.