ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ತುಂಗಾ ನದಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಶೃಂಗೇರಿಯ ಕೆರೆಕಟ್ಟೆ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ,ಶೃಂಗೇರಿಯ ಶಾರದಾ ಮಠದ ಗಾಂಧಿ ಮೈದಾನದ ರಸ್ತೆಗೆ ಮಳೆಯ ನೀರು ತುಂಬಿ ಬಂದಿದೆ. ನೀರು ರಸ್ತೆಗೆ ಬಂದ ಹಿನ್ನೆಲೆ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಹಾಕಿದ್ದು, ವಾಹನಗಳಿಗೆ ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಸಲಹೆ ನೀಡುತ್ತಿದ್ದಾರೆ.

ಮತ್ತಷ್ಟು ಮಳೆ ಹೆಚ್ಚಾದರೆ ನೀರು ರಸ್ತೆಗೆ ಬರುವ ಸಾಧ್ಯತೆ ಹೆಚ್ಚು ಇದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯಲು ಪ್ರಾರಂಭಿಸಿದೆ. ಮಲೆನಾಡಲ್ಲಿ ಗಾಳಿ – ಮಳೆ ಅಬ್ಬರಕ್ಕೆ ನಾಳೆ ಜಿಲ್ಲೆಯ 6 ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಮೂಡಿಗೆರೆ ತಾಲೂಕಿಗೆ ರಜೆ ಘೋಷಣೆ ಮಾಡಲಾಗಿದೆ.
ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳು ಸೇರಿದಂತೆ ಗುಡ್ಡಗಾಡು ಪ್ರದೇಶ ಹಾಗೂ ಘಟ್ಟ ಪ್ರದೇಶಗಳಲ್ಲಿಯೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಕಂಡು ಬರುತ್ತಿದ್ದು, ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗುತ್ತಿದೆ.
ಮಳೆಯಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.