ಪಡ್ಡು ಮಾಡೋಕೆ ದೋಸೆ ಹಿಟ್ಟು ಉಳಿಯಲೇಬೇಕು ಅಂತಿಲ್ಲ ಅಥವಾ ಹಿಟ್ಟನ್ನು ಮೊದಲೇ ಮಾಡಿಕೊಳ್ಳಬೇಕು ಅಂತಾನೂ ಇಲ್ಲ. ಪಡ್ಡು ತಿನ್ನಬೇಕು ಅನಿಸಿದರೆ ಸಾಕು ತಕ್ಷಣ ಮಾಡಿಕೊಳ್ಳಬಹುದು.

ಪಡ್ಡುವನ್ನು ಕೂಡ ಇನ್ಸ್ಟೆಂಟ್ ಆಗಿ ಮಾಡಿಕೊಳ್ಳಬಹುದಾ, ಅಂತಾ ನಿಮಗೆ ಅಚ್ಚರಿ ಆಗ್ತಿರಬೇಕಲ್ವೇ? ಹೌದು, ಇದನ್ನು ಕೂಡ ನಿಮಗೆ ಬೇಕನಿಸಿದಾಗಲೆಲ್ಲಾ ಸುಲಭವಾಗಿ ಮಾಡಿಕೊಳ್ಳಬಹುದು.
ಇನ್ಸ್ಟೆಂಟ್ ರವಾ ಅಪ್ಪಂ ಅನ್ನು ನೀವು ಬೆಳಿಗ್ಗಿನ ತಿಂಡಿಗೆ ಸುಲಭವಾಗಿ ಮಾಡಿಕೊಳ್ಳಬಹುದು. ತ್ವರಿತವಾಗಿಯೂ ಇರುತ್ತದೆ, ರುಚಿಯಾಗಿಯೂ ಇರುತ್ತದೆ. ಮಕ್ಕಳಿಗಂತೂ ಈ ಪಡ್ಡು ಸಖತ್ ಇಷ್ಟವಾಗುತ್ತದೆ. ರವೆ ಬಳಸಿರೋ ಕಾರಣ ಮೃದುವಾಗಿರೋದರ ಜೊತೆ ಕ್ರಿಸ್ಪಿ ಅನುಭವವನ್ನು ಸಹ ನೀಡುತ್ತದೆ. ದೋಸೆ ಹಿಟ್ಟಿನಲ್ಲಿ ಮಾಡೋ ಪಡ್ಡು ರೀತಿಯೇ ಈ ರವಾ ಪಡ್ಡು ಕೂಡ ಬರುತ್ತದೆ.
ರವ ಅಪ್ಪಂ
ಇನ್ಸ್ಟಂಟ್ ರವಾ ಅಪ್ಪಂ/ಪಡ್ಡು
ಪದಾರ್ಥಗಳು
ಸಣ್ಣ ರವೆ – 1 ಕಪ್
ಮಜ್ಜಿಗೆ ಅಥವಾ ವಿಸ್ಕ್ ಮಾಡಿದ ಮೊಸರು – 1 ಕಪ್
ಉಪ್ಪು – 1 ಟೀಸ್ಪೂನ್
ಕರಿಬೇವು – ಸ್ವಲ್ಪ
ಕತ್ತರಿಸಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಧ್ಯಮ ಗಾತ್ರದ ಈರುಳ್ಳಿ – 1
ಇನ್ಸ್ಟಂಟ್ ರವಾ ಅಪ್ಪಂ/ಪಡ್ಡು ಮಾಡುವ ವಿಧಾನ
1. ಒಂದು ಪಾತ್ರೆಯಲ್ಲಿ ರವೆಯನ್ನು ತೆಗೆದುಕೊಂಡು ಅದಕ್ಕೆ ಮಜ್ಜಿಗೆ ಸೇರಿಸಿ. ರವೆಯನ್ನು 10 ನಿಮಿಷಗಳ ಕಾಲ ಮಜ್ಜಿಗೆಯಲ್ಲಿ ನೆನೆಸಲು ಬಿಡಿ. ಮಜ್ಜಿಗೆಯನ್ನು ರವೆ ಹೀರಿಕೊಳ್ಳುತ್ತದೆ.
2. ನಂತರ 1/2 ಕಪ್ ನೀರು ಸೇರಿಸಿ, ಇದಕ್ಕೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈ ಹಿಟ್ಟು ನಿಮ್ಮ ದೋಸೆ ಬ್ಯಾಟರ್ಗಿಂತ ಸ್ವಲ್ಪ ದಪ್ಪವಾಗಿರುವಂತೆ ಸ್ಥಿರತೆಯನ್ನು ನೋಡಿಕೊಳ್ಳಿ.
3. ತದನಂತರ ಪಡ್ಡು ಪ್ಯಾನ್ ಅನ್ನು ಬಿಸಿ ಮಾಡಿ, ಮಾಡಿಟ್ಟುಕೊಂಡ ಬ್ಯಾಟರ್ ಅನ್ನು ಪ್ರತಿ ಡಿಪ್ಪರ್ ಹಾಕಿ. ಆಮೇಲೆ ಎಲ್ಲಾ ಪಡ್ಡು ಮೇಲೆ ಎಣ್ಣೆ ಹಾಕಿ. ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಅದು ಸೈಡ್ ಬೆಂದ ನಂತರ ಒಂದು ಚಮಚ ಬಳಸಿ ಇನ್ನೊಂದು ಬದಿ ಬೇಯಿಸಿ. ಪಡ್ಡು ಗೋಲ್ಡನ್ ಬಣ್ಣ ಬರುವವರೆಗೂ ಎರಡೂ ಬದಿ ಬೇಯಿಸಿಕೊಳ್ಳಿ.
4.ಇಷ್ಟಾದರೆ ರುಚಿಕರವಾದ ಮತ್ತು ಮೃದುವಾದ ರವಾ ಅಪ್ಪಂ ರೆಡಿ. ಇದನ್ನು ನೀವು ಕ್ಷಣ ಮಾತ್ರದಲ್ಲೇ ತಯಾರಿಸಿ ತಿನ್ನಬಹುದು. ತೆಂಗಿನ ಕಾಯಿ ಚಟ್ನಿ, ಕೆಂಪು ಚಟ್ನಿ ಜೊತೆಗೆ ಪಡ್ಡು ಒಳ್ಳೆಯ ಕಾಂಬಿನೇಷನ್.
ಟಿಪ್ಸ್
1. ಬ್ಯಾಟರ್ ಅನ್ನು ನೀರಿನಂತೆ ಮಾಡಬೇಡಿ, ದೋಸೆ ಬ್ಯಾಟರ್ ಗಿಂತ ಸ್ವಲ್ಪ ದಪ್ಪವಾಗುವಂತೆ ನೋಡಿಕೊಳ್ಳಿ.
2. ಈ ಬ್ಯಾಟರ್ಗೆ ತುರಿದ ಕ್ಯಾರೆಟ್ ಮತ್ತು ನುಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ ಅನ್ನು ಸೇರಿಸುವ ಮೂಲಕ ನೀವು ಅದನ್ನು ಪೌಷ್ಟಿಕವಾಗಿಸಬಹುದು. ಮಸಾಲೆ ಪ್ರಿಯರು ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿಗಳನ್ನು ಸಹ ಸೇರಿಸಬಹುದು