ಅಧಿಕಾರ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಯೋಗೇಶ್ವರ್ ಹೋಗುತ್ತಾರೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ನಿಖಿಲ್ ಮಾತನಾಡಿದರು.
ಯೋಗೇಶ್ವರ್ ಅವರಿಗೆ 25 ವರ್ಷದ ರಾಜಕೀಯ ಅನುಭವವಿದೆ. ಅವರು ಒಂದು ಬದ್ಧತೆ ಇಟ್ಟುಕೊಂಡು ರಾಜಕೀಯ ಮಾಡಿಲ್ಲ. ಎಲ್ಲಿ ಅಧಿಕಾರ ಸಿಗುತ್ತೋ ಅಲ್ಲಿಗೆ ಜಂಪ್ ಆಗ್ತಾರೆ ಎಂದು ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕುರಿತು ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ನಾಯಕರ ಕಾರಣಕ್ಕೆ ಯೋಗೇಶ್ವರ್ ಪಕ್ಷ ಬಿಡುವ ವಿಚಾರ ಮಾಡಿಲ್ಲ. ನಮ್ಮಿಂದ ಯಾವುದೇ ತಪ್ಪು ಆಗಿಲ್ಲ. ಜೆಡಿಎಸ್ ಪಕ್ಷದಲ್ಲೇ ಅವರು ಸ್ಪರ್ಧೆ ಮಾಡಬಹುದಿತ್ತು. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಬಹುದಿತ್ತು. ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ. ಕಳೆದ ಎರಡು ತಿಂಗಳಿಂದ ಯೋಗೇಶ್ವರ್ ಕಾಂಗ್ರೆಸ್ ಅವರ ಜೊತೆ ಸಂಪರ್ಕದಲಿದ್ದರು. ರಾಜಕಾರಣವನ್ನು ಅಳೆದುತೂಗಿ ಮಾಡುವ ಬುದ್ದಿಜೀವಿಗಳಿಗೆ ಮುಂದಿನ ಜೀವನ ಹೇಗಿರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ ಬಳಿ 136 ಶಾಸಕರಿದ್ದಾರೆ. ಹೆಸರಿಗೆ ರಾಷ್ಟ್ರೀಯ ಪಕ್ಷ. ಆದರೆ, ಅವರ ಬಳಿ ಅಭ್ಯರ್ಥಿ ಇಲ್ಲ. ಆಪರೇಷನ್ ಹಸ್ತ ಮಾಡಿದರು. ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಸಹೋದರ ಡಿ.ಕೆ.ಸುರೇಶ್ ಅವರ ಸ್ಪರ್ಧೆ ಮಾಡುತ್ತಾರೆ ಎಂದು ಕಥೆ ಕಟ್ಟಲಾಯಿತು. ಈಗ ಯೋಗೇಶ್ವರ್ ಅವರಿಗೆ ಮಣೆ ಹಾಕಿರುವುದು ಆ ಪಕ್ಷದ ದುಃಸ್ಥಿತಿಗೆ ಹಿಡಿದ ಕನ್ನಡಿ ಎಂದು ನಿಖಿಲ್ ಹೇಳಿದರು.