ಭವಿಷ್ಯದಲ್ಲಿ  ರೈತರ ಕೈ ಹಿಡಿಯುವ ಹಣ್ಣಿನ ಬೇಸಾಯ ಡ್ಯಾಗನ್ ಫ್ರ್ಯೂಟ್

ಅಲ್ಲಿಗೆ ಯಾರಾದ್ರೂ ಹೋಗಿ ಭೇಟಿ ಕೊಟ್ಟಿದ್ದೀರಾ..? ಒಂದು ಹನಿ ಕಣ್ಣಿರು ಹಾಕಿದ್ದೀರಾ..?

ಪ್ರಸ್ತುತ ದಿನಗಳಲ್ಲಿ ಕೃಷಿ ಇಳಿಮುಖವಾಗುತ್ತಿರುವುದು ಸಹಜವಾಗಿ ಕಾಣಿಸುತ್ತಿದೆ. ಬತ್ತಿ ಹೋಗುತ್ತಿರುವ ಬೋರ್ರ್ವೆಲ್ ಗಳು, ರೋಗರುಜಿನಗಳಿಂದ ಕೈಗೆ ಸಿಗದ ಬೆಳೆಗಳು ,ಹಲವರಿಗೆ ಅತಿಯಾದ ಸಾಲದ ಒತ್ತಡ, ಇವೆಲ್ಲವೂ ರೈತರಿಗೆ ಕೃಷಿಯ ಮೇಲಿನ ನಂಬಿಕೆ ದಿನದಿಂದ ದಿನಕ್ಕೆ ಕ್ಷೀಣಿಸಲು ಕಾರಣವಾಗುತ್ತಿದೆ . ಇಂತಹ ಹಲವು ಸಮಸ್ಯೆಗೆ ಖಂಡಿತ ಪರಿಹಾರ ದೊರಕುವ ಬೆಳೆ ಎಂದರೆ ಅದು ಡ್ರಾಗನ್ ಹಣ್ಣು.

 ಡ್ರಾಗನ್ ಹಣ್ಣು ಮೂಲತಃ ವಿಯೆಟ್ನಾಮ್ ಬೆಳೆಯಾಗಿದ್ದು, ಶ್ರೀಲಂಕಾ ಮತ್ತು ಥಾಯ್ಲೆಂಡ್ ಗಳಲ್ಲಿ ಸಹ ಬೆಳೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಪಿಟಾಯಾ ಅಥವಾ ಪಿಟಾಹಯಾ.ಇದು ಹೈಲೋಸೀರಿಯಸ್ ಹಣ್ಣಿಗೆ ಸೇರಿದ ಒಂದು ಕಳ್ಳಿ ಜಾತಿಗೆ ಸೇರಿದ ಗಿಡವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಹಣ್ಣಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗಿದೆ . ಪ್ರಸ್ತುತ ಈ ಹಣ್ಣನ್ನು ನಮ್ಮ ಕರ್ನಾಟಕದ ಬಿಜಾಪುರ ಬೆಳಗಾವಿ ದಾವಣಗೆರೆಯಲ್ಲಿ ಬೆಳೆಯುತ್ತಿದ್ದಾರೆ. ಈ ಹಣ್ಣನ್ನು ಭವಿಷ್ಯದ ಹಣ್ಣಿನ ಬೇಸಾಯ ಎಂದು ಕರೆಯಲಾಗುತ್ತದೆ. ಇದನ್ನು ಬೆಳೆಯಲು ಹೆಚ್ಚು ವೆಚ್ಚ ಬರಿಸುವ ಅಗತ್ಯತೆ ಇರುವುದಿಲ್ಲ. ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬಹುದು.

ಬೇಸಾಯ ಕ್ರಮ : ಈ ಹಣ್ಣನ್ನು ವಿಶೇಷವಾಗಿ ಮಳೆ ಬೀಳುವ ಪ್ರದೇಶವನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದು. ಒಣ ಪ್ರದೇಶ ಈ ಬೆಳೆಗೆ ಹೆಚ್ಚು ಸೂಕ್ತವಾಗಿದೆ. ಈ ಹಣ್ಣಿನ ಗಿಡಗಳು ಸಾಮಾನ್ಯವಾಗಿ ಕಾಂಡದ ಮೂಲಕ ಬೆಳೆಯುವಂತಹವು ಆದ್ದರಿಂದ ಸಸಿಗಳು ಕೂಡ ಕಂಡ ರೂಪದಲ್ಲಿ ದೊರೆಯುತ್ತದೆ. ಸುಮಾರು ಒಂದು ಎಕರೆ ಪ್ರದೇಶಕ್ಕೆ ಎಷ್ಟು ಸಸಿಗಳು? ಅದಕ್ಕೆ ಸಂಬಂಧಿಸಿದ ಮಾಹಿತಿ ನೀಡಬಹುದು. 1 ಎಕರೆ ಪ್ರದೇಶದಲ್ಲಿ ಸಾಲಿನಿಂದ ಸಾಲಿಗೆ 12 ಅಡಿ ಗಿಡದಿಂದ ಗಿಡಕ್ಕೆ 7 ಅಡಿಗಳ ಅಂತರ ಉತ್ತಮವಾದದ್ದು. ಒಂದು ಎಕರೆ ಪ್ರದೇಶಕ್ಕೆ ಸರಿಸುಮಾರು 2080 ಸಸಿಗಳನ್ನು ನಾಟಿ ಮಾಡಬಹುದು.

 ನಾಟಿಯ ವಿಧಾನ : ಮೊದಲಿಗೆ 12 /7 ಅಂತರದಲ್ಲಿ ಕಲ್ಲಿನ ಅಥವಾ ಸಿಮೆಂಟ್ ನಿಂದ ತಯಾರಿಸಿದ 7 ಅಡಿ ಎತ್ತರವಿರುವ ಕಂಬಗಳನ್ನು 1.5 ಅಡಿ ಆಳದಲ್ಲಿ ನಿಲ್ಲಿಸಬೇಕು. ಒಂದು ಎಕರೆ ಪ್ರದೇಶಕ್ಕೆ ಸುಮಾರು 518 ಕಂಬಗಳು ಬೇಕಾಗುತ್ತದೆ. ಈ ಹಣ್ಣಿನ ಸಸಿ ಪಾಪಸ್ ಕಳ್ಳಿಯ ಜಾತಿಗೆ ಸೇರಿರುವುದರಿಂದ ಇದಕ್ಕೆ ಆಧಾರ ಬಹಳ ಮುಖ್ಯವಾದುದ್ದು. ಪ್ರತಿ ಕಂಬದ 4 ಬದಿಗಳಲ್ಲಿ ನಾಲ್ಕು ಸಸಿಗಳನ್ನು ನೆಡಬೇಕು. ಅಂದರೆ ಒಂದು ಕಂಬಕ್ಕೆ 4 ಸಸಿಗಳಂತೆ ನಾಟಿ ಮಾಡಬೇಕು. ನಂತರ ಸಿಮೆಂಟಿನ ರಿಂಗು ಗಳು ಅಥವಾ ಟೈಯರ್ ಗಳನ್ನು ಕಂಬದ ಮೇಲ್ಭಾಗದಲ್ಲಿ ಕಟ್ಟಿ.ಇದರಿಂದ ಗಿಡ ವಿಶಾಲವಾಗಿ ಹರಡಿ ಕೊಳ್ಳಲು ಸಹಾಯವಾಗುತ್ತದೆ. ಸುಮಾರು 1 ವರ್ಷಗಳ ಕಾಲ ಗಿಡಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಏಕೆಂದರೆ ಗಾಳಿಗೆ ಮುರಿದು ಬೀಳುವ ಸಾಧ್ಯತೆ ಇರುವುದರಿಂದ ಸರಿಯಾದ ಸಮಯಕ್ಕೆ ಸಸಿಗಳನ್ನು ಕಂಬಕ್ಕೆ ಕಟ್ಟಬೇಕು. ಗಿಡ ನೀವು ಜೋಡಿಸಿರುವ ಸಿಮೆಂಟ್ ರಿಂಗಿನ ಮೇಲೆ ಹರಡಿಕೊಳ್ಳಲು ಪ್ರಾರಂಭಿಸುತ್ತದೆ. ಇದರ ವೆಚ್ಚ ಸುಮಾರು 3-3.5 ಲಕ್ಷ ಎಕರೆ ಖರ್ಚಾಗುತ್ತದೆ. ತಿಂಗಳಿಗೆ ಮೂರರಿಂದ ನಾಲ್ಕು ಬಾರಿ ನೀರು ಪೂರೈಸಿದರೆ ಸಾಕಾಗುತ್ತದೆ.

ರೋಗಗಳು : ಸಾಮಾನ್ಯವಾಗಿ ಈ ಹಣ್ಣಿಗೆ ಯಾವುದೇ ರೋಗಗಳು ಕಂಡುಬರುವುದಿಲ್ಲ. ಕೊಳೆರೋಗ ಮಳೆಗಾಲದ ಸಮಯದಲ್ಲಿ ಕಂಡುಬರುತ್ತದೆ. ಇದಕ್ಕೆ ಪರಿಹಾರವಾಗಿ ಸಸಿ ನಾಟಿ ಮಾಡುವ ಸಮಯದಲ್ಲಿ ಏರುಮಡಿ ಪದ್ಧತಿಯ ಮೂಲಕ ನಾಟಿ ಮಾಡುವುದು ಸೂಕ್ತವಾಗಿರುತ್ತದೆ.

ಈ ಸಸಿಗಳು ಮೊದಲಿಗೆ 18 ತಿಂಗಳಿಗೆ ಹೂ ಬಿಡಲು ಆರಂಭಿಸುತ್ತದೆ. ಜೂನ್ ತಿಂಗಳುಗಳಲ್ಲಿ ಹೂಬಿಟ್ಟು ಜುಲೈ ತಿಂಗಳಿನಲ್ಲಿ ಹಣ್ಣಾಗುತ್ತದೆ. ನಾಲ್ಕು ತಿಂಗಳು ಸತತವಾಗಿ ಐದು ಬಾರಿ ಹಂತಹಂತವಾಗಿ ಹಣ್ಣು ಬಿಡುತ್ತದೆ. ಉತ್ತಮ ಬೇಸಾಯಕ್ರಮವನ್ನು ಅನುಸರಿಸಿದರೆ ಒಂದು ಕಂಬಕ್ಕೆ ಸುಮಾರು 18ರಿಂದ 20 ಹಣ್ಣುಗಳು ದೊರೆಯುತ್ತವೆ. ಒಂದು ಹಣ್ಣು ಶೇಕಡ ಅರ್ಧ ಕೆಜಿ ತೂಗುತ್ತದೆ . ಪ್ರಸ್ತುತ ಮಾರುಕಟ್ಟೆಯ ಬೆಲೆ ಒಂದು ಕೆಜಿಗೆ 300 ರಿಂದ 400 ರೂಪಾಯಿಗಳು. ಇಳುವರಿ ಬಂದ ಮೊದಲ ವರ್ಷದಲ್ಲಿ ಎಕರೆಗೆ ಎರಡರಿಂದ ಮೂರು ಲಕ್ಷ ಆದಾಯವನ್ನು ಗಳಿಸಬಹುದು. ಎರಡನೆಯ ವರ್ಷಕ್ಕೆ ನಾಲ್ಕರಿಂದ ಐದು ಲಕ್ಷ ಆದಾಯವನ್ನು ಯಾವುದೇ ಸಂದೇಹವಿಲ್ಲದೆ ಗಳಿಸಬಹುದು.ಈ ಹಣ್ಣಿನಲ್ಲಿ ಮೂರು ವಿಧಗಳಿವೆ ,,ಕೆಂಪು ಡ್ರಾಗನ್ ಹಣ್ಣು, ಬಿಳಿ ಡ್ರಾಗನ್ ಹಣ್ಣು ,ಹಳದಿ ಡ್ರಾಗನ್ ಕಣ್ಣು. ಪ್ರಸ್ತುತವಾಗಿ ಕೆಂಪು ಡ್ರಾಗನ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು. ಇದು ಸರಾಸರಿಯಾಗಿ ಸತತವಾಗಿ 30 ವರ್ಷಗಳ ಕಾಲ ಇಳುವರಿ ಪಡೆಯಬಹುದು.ಈ ಹಣ್ಣಿನ ಬೇಸಾಯಕ್ಕೆ ಕೃಷಿ ಇಲಾಖೆಯಿಂದ ಸಬ್ಸಿಡಿ ದೊರೆಯುತ್ತದೆ . ಒಂದು ಎಕರೆಗೆ ಸಾಮಾನ್ಯರಿಗೆ 1.20 ಲಕ್ಷ ಪರಿಶಿಷ್ಟ ಜಾತಿ ಪಂಗಡದವರಿಗೆ 1.80 ಲಕ್ಷ ರೂಪಾಯಿಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ.

 ಔಷಧೀಯ ಗುಣಗಳು: ಈ ಹಣ್ಣು ನೈಸರ್ಗಿಕವಾಗಿ ಹೇಳಿ ಮಾಡಿಸಿದಂತಿದೆ. ಹೆಚ್ಚು ಸಿಹಿ ಯಾಗಿರುವುದಿಲ್ಲ ಸ್ವಲ್ಪಮಟ್ಟಿಗೆ ಸಪ್ಪೆ ಆಗಿರುವುದರಿಂದ ಸಕ್ಕರೆ ಕಾಯಿಲೆಗೆ ರಾಮಬಾಣವಾಗಿದೆ. ಕ್ಯಾನ್ಸರ್, ಚರ್ಮರೋಗ ಮುಂತಾದ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ದೇಹದ ಇನ್ಸುಲಿನ್, ಬಿಳಿ ರಕ್ತಕಣಗಳ ಅಭಿವೃದ್ಧಿಗೆ ಸಹಾಯಕವಾಗಿದೆ. ವಾರಕ್ಕೆ ಒಂದೊಂದು ಹಣ್ಣನ್ನು ಸೇವಿಸಿದರೆ ನಮ್ಮ ಆರೋಗ್ಯ ಸುಸ್ಥಿರವಾಗಿ ಇರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇಂತಹ ಅದ್ಭುತವಾದ ಲಾಭದಾಯಕವಾದ ಬೇಸಾಯವನ್ನು ನಮ್ಮ ಕೃಷಿಕರು ಸ್ವಲ್ಪ ಮನಸ್ಸಿನಲ್ಲಿ ಇಟ್ಟುಕೊಂಡು ಆರಂಭಿಸಿದರೆ ಅವರಿಗೆ ಅಧಿಕ ಲಾಭ ಕೈಗೆ ಸಿಗುತ್ತದೆ. ನಮ್ಮ ರೈತಬಾಂಧವರು ಹೊಸ ಹೊಸ ಅವಿಷ್ಕಾರಗಳನ್ನು ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದರೆ ಯಶಸ್ವಿ ರೈತನಾಗಹುದು.

Leave a Reply

Your email address will not be published. Required fields are marked *