ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮಂಗಳವಾರ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ ಎಲ್ಲರನ್ನು ಒಗ್ಗೂಡಿಸಿ ಶಾಂತಿ, ನೆಮ್ಮದಿಯಿಂದ ಸಮಾಜದ ಎಲ್ಲ ವರ್ಗವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಸಾರಾಂಶವನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದುಗಳಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆ ರೀತಿ ಯಾರು ಇರುತ್ತಾರೋ ಅವರಿಗೆ ಅನ್ವಯಿಸುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆ. ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು
ಇದೇ ವೇಳೆ ನಟ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಆರೋಪ ಕುರಿತು ಮಾತನಾಡಿದ ಸಚಿವರು, ದರ್ಶನ್‌ಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸತ್ಕಾರ ಕೊಡುತ್ತಿಲ್ಲ. ಇದರ ಬಗ್ಗೆ ಅಂದೇ ಸ್ಪಷ್ಟಪಡಿಸಿದ್ದೇನೆ. ಬಿರಿಯಾನಿ ಅವೆಲ್ಲ ಏನೂ ಕೊಡುತ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡುತ್ತಿಲ್ಲ. ಬೇಕಾದರೆ ನನ್ನ ಜೊತೆ ಬನ್ನಿ, ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.