ತುಮಕೂರು: ದಲಿತ ಸಂಘಟನೆ ಸಮಾವೇಶದ ಸಮಾರೋಪದಲ್ಲಿ ಭಾಗಿಯಾಗಲು ತುಮಕೂರಿಗೆ ಆಗಮಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಎಸ್‌ಎಸ್‌ಐಟಿ ಅತಿಥಿಗೃಹದಲ್ಲಿ ಭೇಟಿಯಾಗಿ ಜೊತೆಯಲ್ಲಿ ಊಟಮಾಡಿರುವುದು ರಾಜಕೀಯ ಚರ್ಚೆಗೆ ಗ್ರಾಸವೊದಗಿಸಿದೆ.
ಈ ಭೇಟಿ ಕುರಿತು ಮಾಧ್ಯಮಗಳಿಗೆ ಸ್ಪಷ್ಟೀಕರಿಸಿದ ಸತೀಶ್ ಜಾರಕಿಹೊಳಿ ಅವರು ಭೇಟಿ ಆಗಿದ್ದು ನಿಜ. ಊಟ ಮಾಡಿಸಿದರು ಅಷ್ಟೇ. ನನ್ನದು ಬೇರೆ ಕಾರ್ಯಕ್ರಮ ಇತ್ತು, ಅಲ್ಲಿಗೆ ಬಂದಿದ್ದೆ. ಈ ವೇಳೆ ಸಾಹೇಬರನ್ನು ನೋಡಲು ಬಂದೆ. ಅವರು ಊಟ ಮಾಡಿಸಿದರು. ಬೇರೆ ಚರ್ಚೆ ಇಲ್ಲ. ಮೂಡಾ ಪ್ರಕರಣ ಕುರಿತಾಗಿ ನಾವು ಈಗಾಗಲೇ ಸಿಎಂ ರಾಜೀನಾಮೆ ಕೊಡಬೇಡಿ ಅಂತಾ ಸ್ಪಷ್ಟಪಡಿಸಿದ್ದೇವೆ. ದಲಿತ ಸಿಎಂ ಪ್ರಸ್ತಾವನೆ ಸದ್ಯಕ್ಕಿಲ್ಲ. ಇದ್ದಾಗ ನಾವೇ ಹೇಳುತ್ತೇವೆ ಎಂದರು. ಖರ್ಗೆಯವರನ್ನು ಭೇಟಿ ಮಾಡಿರುವುದ ಸಹ ಪರಮೇಶ್ವರ್ ಅವರನ್ನು ಈಗ ಭೇಟಿಮಾಡಿದಂತೆ ಸಹಜ ಭೇಟಿಯಷ್ಟೇ ಎಂದು ಸಮರ್ಥಿಸಿಕೊಂಡರು. ಪದೇ ಪದೇ ದಲಿತ ಸಮುದಾಯದ ಸಚಿವರುಗಳ ಭೇಟಿ ಕುರಿತು ಸಹ ನೀವೆಲ್ಲಾ ಹೇಗೆ ಸೇರುತ್ತಿರುತ್ತೀರೋ, ಹಾಗೆ ನಾವು ಕೂಡ ಸೇರುತ್ತಾ ಇರುತ್ತೀವಿ ಅಷ್ಟೇ ಎಂದು ತಿಳಿಸಿದರು.