ಧಾರವಾಡ : ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು ಅಂದಾಗ ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇರಲು ಕಾರಣ ನಾವೇ ಆಗಿದ್ದೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಧಾರವಾಡದ ಜೆ.ಎಸ್.ಎಸ್. ಸನ್ನಿಧಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಅವರ ಸಂಯುಕ್ತಾಶ್ರಯದಲ್ಲಿ ಬದಲಾವಣೆಯ ಶಿಕ್ಷಣ; ಭವಿಷ್ಯದ ನಿರ್ಮಾಣ 2025-26 ಅಂಗವಾಗಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪ್ರಧಾನ ಗುರುಗಳ, ಮುಖ್ಯೋಪಾಧ್ಯಾರ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ (ಎಸ್.ಡಿ.ಎಂ.ಸಿ.) ಅಧ್ಯಕ್ಷರಿಗೆ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಸಮಾರೋಪ ಹಾಗೂ ಕಳೆದ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಸಮಾಜ, ಶಾಲೆ ಮತ್ತು ಮನೆಯ ವಾತಾವರಣದ ಮೇಲೆ ಮಕ್ಕಳು ಬೆಳೆಯುತ್ತಾರೆ. ಆದ್ದರಿಂದ ಮಕ್ಕಳ ಜೀವನದ ಮೇಲೆ ವಿಶೇಷವಾದ ಪರಿಣಾಮ ಬೀರುವ ಮಾತುಗಳನ್ನಾಡಿ, ತಿಳಿವಳಿಕೆ ಹೇಳಿ. ಅವರ ಜ್ಞಾನದ ಬಗ್ಗೆ, ಗುರಿಯ ಬಗ್ಗೆ ಶಿಕ್ಷಕರು ಮಕ್ಕಳಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಾಗೂ ಅವರ ಶೈಕ್ಷಣಿಕ ಪ್ರಗತಿ ಸಾಧಿಸಲು ಹಾಗೂ ಮಕ್ಕಳ ಶ್ರೇಯೊಭಿವೃದ್ದಿಗಾಗಿ ಉತ್ತಮ ಕೆಲಸ ಮಾಡಬೇಕು. ನಮ್ಮ ಶಾಲೆಗಳ ಬಗ್ಗೆ ನಮ್ಮಗೆ ಹೆಮ್ಮೆ, ಗರ್ವ ಮೂಡುವಂತಾಗಬೇಕು ಎಂದು ತಿಳಿಸಿದರು.