ಬೆಂಗಳೂರು: ನಟ ದರ್ಶನ್ ತೂಗುದೀಪ ಸಹಚರರಿಂದ ಹತ್ಯೆಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಲು ನಿನ್ನೆ ತೆರಳಬೇಕಿತ್ತು. ಆದರೆ, ಬಕ್ರೀದ್ ಹಬ್ಬ ಇದ್ದರಿಂದ ಹೋಗಲು ಸಾಧ್ಯವಾಗಿಲ್ಲ. ರೇಣುಕಾಸ್ವಾಮಿ ಮನೆಗೆ ಭೇಟಿ ಕೊಟ್ಟು ಧೈರ್ಯ ಹೇಳಿ ಬರುತ್ತೇನೆ ಎಂದರು
ರೇಣುಕಾಸ್ವಾಮಿ ಕುಟುಂಬದ ಸದಸ್ಯರಿಗೆ ಆರ್ಥಿಕ ನೆರವು ನೀಡುವ ಬಗ್ಗೆ, ತನಿಖೆ ನಡೆದ ಬಳಿಕ ಆರ್ಥಿಕ ನೆರವು ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರದಿಂದ ನೆರವು ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದರು.
ಸಂಬಂಧಪಟ್ಟವರನ್ನು ತನಿಖೆ ಮಾಡಲಾಗುವುದು: ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣಗೆ ನೋಟಿಸ್ ನೀಡಿರುವ ಬಗ್ಗೆ, ಸಿನಿಮಾ ನಟರು ಆಗಿರೋದ್ರಿಂದ ಕಲಾವಿದರು ಸಂಪರ್ಕದಲ್ಲಿರುವುದು ಸಹಜ. ಸಾಕ್ಷ್ಯಾಧಾರಗಳ ಮೇಲೆ ತನಿಖೆ ಮುಂದುವರೆಯುತ್ತದೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ತನಿಖೆ ಮಾಡಲಾಗುವುದು ಎಂದರು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ದರ್ಶನ್ ಸೇರಿದಂತೆ 19 ಜನರು ಬಂಧನದಲ್ಲಿದ್ದಾರೆ